Saturday, January 17, 2009

Friday, January 2, 2009

Book Review of Manassu Illada Maarga of Dr. Meenagundi Subrahmanyam in Pustaka Preethi

http://pusthakapreethi.wordpress.com/2009/01/01

Book Review of Manassu Illada Maarga of Dr. Meenagundi Subrahmanyam

ನನಗೆ ಗೀತೆ, ಕುರಾನ್, ಬೈಬಲ್ ಸರ್ವವೂ ಆಗಿರುವ ಒಂದು ಪುಸ್ತಕ


ಪುಸ್ತಕ ಪ್ರೀತಿ ಬ್ಲಾಗ್ ಓದುಗರಿಗೆ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷದ ಮೊದಲ ದಿನ ನನಗೆ ಗೀತೆ, ಕುರಾನ್, ಬೈಬಲ್ ಸರ್ವವೂ ಆಗಿರುವ ಒಂದು ಪುಸ್ತಕದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ಈ ಪುಸ್ತಕ ಮನಶ್ಶಾಸ್ತ್ರಕ್ಕೆ ಸಂಬಂದಿಸಿದ್ದು. ಇದೇನು ಮೊದಲ ವರ್ಷದ ಮೊದಲ ದಿನ ಇಂತಹ ಪುಸ್ತಕವನ್ನು ಪರಿಚಯಿಸಲು ಹೊರಟಿದ್ದು ಎಂದು ಬೇಸರಿಸಬೇಡಿ. ಇದು ಅಂತಿಂಥ ಪುಸ್ತಕವಲ್ಲ! ನನ್ನಲ್ಲಿ ನನಗೆ ನಂಬಿಕೆ ಹುಟ್ಟಿಸಿದ ಪುಸ್ತಕ ಇದು. ನನ್ನ ಎಲ್ಲಾ ನಕಾರಾತ್ಮಕ ಅನುಭವಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡಿದ ಪುಸ್ತಕ ಇದು. ಹಾಗೇ ನನ್ನ ಬಾಳಿನ ಹಾದಿಯಲ್ಲಿ ಯಾವುದೇ ನಕಾರಾತ್ಮಕ ಅನುಭವಗಳು ಆದೊಡನೆ ಈ ನಕಾರಾತ್ಮಕ ಅನುಭವಕ್ಕೆ ನಾನು ಎಷ್ಟರ ಮಟ್ಟಿಗೆ ಕಾರಣ ಅದನ್ನು ಇನ್ನು ಮುಂದೆ ನನ್ನ ಬಾಳಿನಲ್ಲಿ ಬರದಂತೆ ಮಾಡುವಲ್ಲಿ ನನ್ನ ಮಾರ್ಗದ ರ್ಶಿಯಾದದ್ದು ಈ ಪುಸ್ತಕ.
`ತಲೆ ಸರಿ ಇಲ್ಲದವರಿಗೆ ಮಾತ್ರ ಸೈಕಾಲಜಿ‘ ಎಂಬ ಸಾರ್ವತ್ರಿಕ ಕಲ್ಪನೆ ಪ್ರಬಲವಾಗಿ ಚಲಾವಣೆಯಲ್ಲಿದೆ. ಆದರೆ `ತಲೆ ಸರಿ ಇರುವವರು‘ ಕೂಡ ಸೈಕಾಲಜಿ ತಿಳಿದು ತಮ್ಮ `ಸರಿಯಾದ‘ ಜೀವನ ಶೈಲಿಯನ್ನು ಇನ್ನಷ್ಟು ಸರಿಮಾಡಿಕೊಳ್ಳಬಹುದು ಎಂಬುದು ವಾಸ್ತವ. ಸೈಕೋಥೆರಪಿ ಎಂದರೆ ಯಾರು ಅಥವಾ ಯಾವುದು ಸರಿ ಅಥವಾ ತಪ್ಪು ಎಂದು ನ್ಯಾಯ-ನಿರ್ಣಯ ಮಾಡಿ ಬುದ್ಧಿಮಾತು ತಿಳಿಹೇಳುವುದಲ್ಲ; ಈಗ ಇರುವ ಸಮಸ್ಯೆ ಪರಿಹಾರ ಆಗುವಂತೆ ಮನುಷ್ಯ ತನ್ನನ್ನು ಮತ್ತು ತನ್ನ ಪರಿಸರವನ್ನು ನೋಡುತ್ತಿರುವ ರೀತಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡುವುದು. ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡುವ ಪುಸ್ತಕ `ಮನಸ್ಸು ಇಲ್ಲದ ಮಾರ್ಗ’.
ಮನುಷ್ಯನ ಮಿದುಳು ಒಂದು ವಿಶೇಷ ರೀತಿಯ `ಕ್ಯಾಸೆಟ್ ರೆಕಾರ್ಡರ್ ಪ್ಲೇಯರ್‘ ನಂತೆ ಕೆಲಸ ಮಾಡುತ್ತದೆ. ಮಿದುಳಿನಲ್ಲಿ ಒಮ್ಮೆ ಮುದ್ರಿತವಾದ ವಿವರಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಹುಟ್ಟಿದಂದಿನಿಂದ ಈ ಕ್ಷಣದವರೆಗೆ ಒಬ್ಬ ಮನುಷ್ಯನ ಜೀವನದ ಪ್ರತಿಯೊಂದು ಘಟನೆಯ ಸ್ಪರ್ಶ, ರಸ, ಗಂಧ, ದೃಶ್ಯ ಮತ್ತು ಶ್ರಾವ್ಯ ವಿವರಗಳನ್ನು ಅವನ ಮಿದುಳು ಶಾಶ್ವತ ರೂಪದಲ್ಲಿ ದಾಖಲಿಸಿಕೊಳ್ಳುತ್ತದೆ. ಜನಸಾಮಾನ್ಯರ ಕಲ್ಪನೆಯಲ್ಲಿರುವಂತೆ `ಮನಸ್ಸು‘ ಕೆಲಸ ಮಾಡುವ ಅವಯವ ಅಲ್ಲ. ಮಿದುಳು ಎಂಬ ಅವಯವದ ಎಲ್ಲ ಕ್ರಿಯೆಗಳನ್ನು ಮನಸ್ಸು ಎಂಬ ಒಂದೇ ಶಬ್ದದಡಿಯಲ್ಲಿ ವಿಜ್ಞಾನಿಗಳು ಕರೆಯುತ್ತಾರೆ (ಫಂಕ್ಶನಲ್ ಆಸ್ಪೆಕ್ಟ್ ಆಫ್ ಬ್ರೈನ್ ಈಸ್ ಮೈಂಡ್).
ಅಸಂಗತ ಮತ್ತು ಅನಾವಶ್ಯಕ ಭಯ, ದುಃಖ, ಕೋಪಗಳನ್ನು ಅನುಭವಿಸುತ್ತಾ ತಮ್ಮ ಜನ್ಮಸಿದ್ಧ ಹಕ್ಕು ಆದ ಆತ್ಮೀಯತೆ ಮತ್ತು ಸಂತೋಷದ ಅನುಭವದಿಂದ ಸ್ವಯಂ ವಂಚಿತರಾಗಿದ್ದ (ಮಾನಸಿಕ ಸಮಸ್ಯೆಯ) ವ್ಯಕ್ತಿಗಳು ಸೈಕಾಲಾಜಿಸ್ಟ್ `ಏನೋ‘ ಮಾಡಿ ತಮ್ಮ `ಮನಸ್ಸನ್ನು‘ ಸರಿ ಮಾಡುತ್ತಾನೆ, ಬದಲಾಯಿಸುತ್ತಾನೆ. ಇದರಿಂದಾಗಿ ತಮ್ಮ `ಮನಸ್ಸಿನಲ್ಲಿ‘ ಮತ್ತು ದೇಹದಲ್ಲಿ ಆಗುತ್ತಿರುವ ನಕಾರಾತ್ಮಕ ಅನುಭವಗಳು ನಿಲ್ಲುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡು ನನ್ನ ಸಹಾಯ ಬಯಸಿ ಬಂದಿದ್ದರು. ಆದರೆ ಇವರೆಲ್ಲರಿಗೆ ನಾನು ತೋರಿಸಿದ್ದು `ಮನಸ್ಸು‘ ಇಲ್ಲದ ಮಾರ್ಗವನ್ನು, ಥೆರಪಿಯ ನವ್ಯ ಮಾರ್ಗವನ್ನು ಎನ್ನುತ್ತಾರೆ ಸ್ವತಃ ಥೆರಪಿಸ್ಟ್ ಆಗಿರುವ ಲೇಖಕರು. ಅಂದರೆ ಮನೋರೋಗದ ಸೃಷ್ಟಿ ಮತ್ತು ನಿವಾರಣೆ ಈ ಎರಡಕ್ಕೂ ಆಧಾರ ಒಂದೇ - ಮನುಷ್ಯನ ನೆನಪಿಸಿಕೊಳ್ಳುವ ಕ್ರಿಯೆ. ಈ ಕ್ರಿಯೆಯನ್ನು `ನಾನು ಮಾಡುತ್ತಿದ್ದೇನೆ‘ ಎನ್ನುವವನು ಬದುಕಿನಲ್ಲಿ ಗೆಲ್ಲುತ್ತಾನೆ; `ನಾನಲ್ಲ, ನನ್ನ `ಮನಸ್ಸು‘ ಮಾಡುತ್ತಿದೆ ಎನ್ನುವವನು ಅನುಕಂಪ ಪಡೆಯುವುದರಲ್ಲಿ ಕೆಲವೊಮ್ಮೆ ಗೆಲ್ಲಬಹುದು.
ಸಾಂಪ್ರದಾಯಿಕ ಥೆರಪಿಗೆ ಪರ್ಯಾಯವಾಗಿ ಹುಟ್ಟಿದ ಎಲ್ಲ ನವ್ಯ ಥೆರಪಿಗಳ ಸಾಮಾನ್ಯ ಅಂಶ - ಮನುಷ್ಯ ಮತ್ತು ಮನಸ್ಸು ಈ ಎರಡನ್ನೂ ಒಂದಾಗಿ ಪರಿಗಣಿಸಿ ಮನುಷ್ಯನನ್ನೇ ವಾಸಿ ಮಾಡಬೇಕು ಎಂಬ `ಸಮಗ್ರ ಮನುಷ್ಯ‘ ಸಿದ್ಧಾಂತ (ಹೊಲಿಸ್ಟಿಕ್ ಫಿಲಾಸಫಿ). ನವ್ಯ ಥೆರಪಿಗಳಲ್ಲಿ ತೀರ ಇತ್ತೀಚಿನದು ಟ್ರ್ಯಾನ್ಸ್ಯಾಕ್ಶನಲ್ ಅನಾಲಿಸಿಸ್-ಟಿಎ. ಪರ್ಸನಾಲಿಟಿ, ಕಮ್ಯೂನಿಕೇಶನ್ ಮತ್ತು ಮೋಟಿವೇಶನ್ ಎಂದರೆ ವ್ಯಕ್ತಿತ್ವ, ಸಂಪರ್ಕ ಮತ್ತು ಪ್ರವರ್ತಕ ಉದ್ದೇಶ ಈ ಮೂರನ್ನೂ ಒಳಗೊಂಡ ಸಮಗ್ರ ಸಿದ್ಧಾಂತ ಈ ಟಿಎ.
1970 ರಿಂದ 1982. ವೃತ್ತಿ ಜೀವನದಲ್ಲಿ ಯಶಸ್ವಿ ವೈದ್ಯ, ಆದ್ದರಿಂದ ಗೌರವಾನ್ವಿತ ವ್ಯಕ್ತಿಯಾಗಿಯೇ ಸಮಾಜದಿಂದ ಪರಿಗಣಿಸಲ್ಪಟ್ಟಿದ್ದೆ. ಆದರೆ ನನ್ನ ಬಗ್ಗೆ ನಾನು ಅತೃಪ್ತನಾಗಿದ್ದೆ. ಶೀಘ್ರಕೋಪ, ತಪ್ಪಿದರೆ ಖಿನ್ನತೆ. ಈ ಎರಡರಿಂದಾಗಿ ಜೀವನ ಪ್ರೀತಿ ಇಲ್ಲವಾಗಿತ್ತು. ಕೋಪ, ಖಿನ್ನತೆ ಕಳೆದುಕೊಳ್ಳಲು ಸೈಕ್ರಿಯಾಟ್ರಿಸ್ಟ್, ಸೈಕಾಲಾಜಿಸ್ಟರ ಬೇಟಿ. ಪರಿಣಾಮ - ಸಮಸ್ಯೆಗಳು ಹೆಚ್ಚಾಗಲಿಲ್ಲ ಎಂಬುದೊಂದೇ ಸಮಾಧಾನ. ಆದರೆ ತೊಲಗಲಿಲ್ಲ. ಸಮಸ್ಯೆಗಳನ್ನು ತೊಲಗಿಸಿಕೊಳ್ಳಲು ಮಾರ್ಗಗಳ ಹುಡುಕಾಟ ಮುಂದುವರಿಸಿಯೇ ಇದ್ದೆ. ಕೊನೆಗೊಮ್ಮೆ ಟಿಎ ಸೈಕಾಲಾಜಿಯ ನೆರವಿನಿಂದ, 1983ರಲ್ಲಿ, ನನ್ನ ಸಮಸ್ಯೆಗಳನ್ನು ನೀಗಿಕೊಳ್ಳುವಲ್ಲಿ ಯಶ ಸಾಧಿಸಿದೆ! ತರಬೇತಿಯ ಕೊನೆಯ ದಿನಗಳಲ್ಲಿ, ನಿಷ್ಕ್ರಿಯ ಮಾರ್ಗಗಳಲ್ಲಿ (ಪ್ಯಾಸಿವ್ ಅಪ್ರೋಚ್) ವ್ಯರ್ಥ ಹೋರಾಟ ಮಾಡುತ್ತಲಿರುವ ಓದು ಬಲ್ಲ ಕನ್ನಡ ಬಂಧುಗಳಿಗೆ ಟಿಎಯನ್ನು ತಲುಪಿಸಬೇಕು ಎಂಬ ಆಲೋಚನೆ ಮೂಡಿತು. ಟಿಎಯ ವೈಶಿಷ್ಟ್ಯ ಇರುವುದೇ ಇಲ್ಲಿ-ಇದನ್ನು ಅನುಭವಿಸಿದವರಲ್ಲಿ (ಓದುವುದಲ್ಲ, ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅನುಭವಿಸಿರಬೇಕು) ಟಿಎ ಒಂದು ಸಾಮಾಜಿಕ ಹೊಣೆಯನ್ನು ಬಡಿದೆಬ್ಬಿಸುತ್ತದೆ. ಕಾಲ ಕಳೆದಂತೆ ಯೋಚನೆ ಗಟ್ಟಿ ನಿರ್ಧಾರವಾಯಿತು. ನಿರ್ಧಾರ ಕಾರ್ಯಗತವೂ ಆಯಿತು. ನನ್ನ ಮನೆಯಲ್ಲಿ ನಡೆಯುವ ಥೆರಪಿ ಗ್ರೂಪ್ ಗೆ ಸೀಮಿತವಾಗಿದ್ದ ಟಿಎ `ಮನಸ್ಸು ಇಲ್ಲದ ಮಾರ್ಗ‘ ದಿಂದಾಗಿ ನಾಡಿನ ಇತರ ಭಾಗಗಳಿಗೂ ತಲುಪಿತು ಎನ್ನುತ್ತಾರೆ ಮೀನಗುಂಡಿ ಸುಬ್ರಹ್ಮಣ್ಯಂ, `ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ‘ ಪುರಸ್ಕೃತ ಈ ಪುಸ್ತಕವನ್ನು ಬರೆಯುವ ತಮ್ಮ ತುಡಿತದ ಬಗ್ಗೆ ಹೇಳುತ್ತಾ.
ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ವೈಜ್ಞಾನಿಕ ಪಂಥಗಳು ಇವೆ. ಇವುಗಳಲ್ಲಿ, ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತ ಮತ್ತು 1970 ರಿಂದೀಚೆಗೆ ಭಾರತವೂ ಸೇರಿದಂತೆ ವಿಶ್ವಾದ್ಯಂತ ಪ್ರಬಲವಾಗಿ ಬೆಳೆಯುತ್ತಿರುವ ಎರಡು ಪಂಥಗಳು ಗೆಸ್ಟಾಲ್ ಥೆರಪಿ ಮತ್ತು ಟ್ರ್ಯಾನ್ಸ್ಯಾಕ್ಶನಲ್ ಅನಾಲಿಸಿಸ್. ಈ ಎರಡು ಪಂಥಗಳನ್ನು ಆಧರಿಸಿ ಮಾನಸಿಕ ಸಮಸ್ಯೆಗಳನ್ನು ಹೇಗೆ ವಾಸಿ ಮಾಡಲಾಗುತ್ತದೆ ಎಂಬುದನ್ನು ತಿಳಿಸಲು, ಲೇಖಕರ ಉಪವೃತ್ತಿಯ, ಕೆಲವು ಚಿಕತ್ಸಾ ವರದಿಗಳನ್ನು ಇಲ್ಲಿ ನಾವು ಓದಬಹುದು. ತಮ್ಮ ಯೋಚನೆ, ಮಾತು, ಕೃತಿಗಳ ಅರ್ಥ (ಇನ್ ಸೈಟ್) ತಿಳಿದಾಗ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಗಳು ತಮ್ಮ ನಿಲುವನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸಲು ಚಿಕಿತ್ಸೆಯ ಸಂವಾದಗಳನ್ನು, ಅವು ನಡೆದಂತೆಯೇ ಬರೆಯಲಾಗಿದೆ. (ಗೋಪ್ಯ ಕಾಪಾಡಲು ಹೆಸರು ಬದಲಾಯಿಸಲಾಗಿದೆ.)
ಮನೋರೋಗ ಚಿಕಿತ್ಸೆಯ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಸಂಶಯಗಳಿಗೆ ಉತ್ತರ ನಿವಾರಣೆ ಈ ಪುಸ್ತಕದಲ್ಲಿದೆ.
ಪುಸ್ತಕದ ಆರಂಭದಲ್ಲಿಯೇ `ಶಾಪ‘ಗಳಿಂದ ಬಿಡುಗಡೆ ಮಾಡಿದ `ರೆವರೆಂಡ್ ಫಾದರ್ ಜಾರ್ಜ್ ಕಂಡತ್ತಿಲ್ಲ ಎಸ್.ಜೆ. ಮತ್ತು ಸಿಸ್ಟರ್ ಅನ್ನಿ ಮಾರಿಯ ಸಿ.ಎಂ. ಅವರಿಗೆ ಸಪ್ರೇಮ ಅರ್ಪಣೆ ಎಂದಿದ್ದಾರೆ ಲೇಖಕರು. ಅರೆ! ಪುರಾಣ ಕತೆಗಳಲ್ಲಿ ಬರುವ `ಶಾಪ‘ ಎನ್ನುವ ಶಬ್ದ ಈ ಪುಸ್ತಕದಲ್ಲಿ ಹೇಗೆ? ಆಶ್ಚರ್ಯವಾಗಿರಬೇಕಲ್ಲ. ಇದಕ್ಕಿಂತ ಆಶ್ಚರ್ಯ ಈ `ಶಾಪ‘ ಗಳ ವಿವರಣೆಯನ್ನು ಓದಿದಾಗ ಆಗುತ್ತದೆ :
ಮಗು ತನ್ನ ಮಿದುಳಿನಲ್ಲಿ ದಾಖಲಿಸಿದ ತಂದೆ ತಾಯಿ ಮತ್ತಿತರ ಪೋಷಕರ ಮಗುವಿನ ಭವಿಷ್ಯದ ಬಗೆಗಿನ ಮಾತುಗಳನ್ನು `ಸಂದೇಶ‘ (ಮೆಸೇಜ್) ಎಂತಲೂ, ಈ ಸಂದೇಶವನ್ನು ಯಾವ ರೀತಿ ಅಥವಾ ಯಾರ ಹಾಗೆ ಸಾಧಿಸಬಹುದು ಎನ್ನುವ ಮಾಹಿತಿಗಳನ್ನು `ಮಾದರಿ‘ (ಮಾಡೆಲ್) ಎಂತಲೂ, ಅಸಹಾಯಕ ಕೋಪ, ದುಃಖದಿಂದ ಅಥವಾ ತಮಾಷೆಗೆ ಎಂದು ಮಗುವಿಗೆ ಹೇಳುವ ನಕಾರಾತ್ಮಕ ಮಾತುಗಳನ್ನು `ಶಾಪ‘ (ಇಂಜಕ್ಷನ್ ಅಥವಾ ಕರ್ಸ್ಸ್) ಎಂದೂ ಕರೆಯಲಾಗುತ್ತದೆ.
ಸಂದೇಶ, ಮಾದರಿ, ಶಾಪಗಳ ರೀತಿ ಮತ್ತು ಶಾಪಗಳ ನಕಾರಾತ್ಮಕತೆಯ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು ವಿನಾ ಇವನ್ನು ಕೊಡದ ತಂದೆ ತಾಯಿಯರೂ ಇಲ್ಲ, ಇವನ್ನು ಪಡೆಯದ ಮಗುವೂ ಇಲ್ಲ.
`ಪ್ರೀತಿಯಿಂದ, ಅವನು/ಳು ಕೇಳಿದ್ದೆಲ್ಲ ಕೊಟ್ಟು, ಚೆನ್ನಾಗಿಯೇ ಬೆಳೆಸಿದ್ದೇವೆ,’ ಎನ್ನುವ ತಂದೆತಾಯಂದಿರು ತಮಾಷೆಗೆ ಎಂದು ಮತ್ತು ಶಿಸ್ತು, ಸಂಯಮ, ಬುದ್ದಿ ಕಲಿಸುವ ಹೆಸರಿನಲ್ಲಿ `ಅವನ/ಳ ಒಳ್ಳೆಯದಕ್ಕೇ‘ ಮಾಡುವ ಹೆಚ್ಚಿನ ಕೆಲಸಗಳೆಲ್ಲ `ಶಾಪ‘ವೇ ಆಗುವುದು ಮನುಷ್ಯ ಜೀವನದ ದುರಂತ!
ಹೀಗೆ ನಮ್ಮ ದೈನಂದಿನ ಬದುಕಿನಲ್ಲಿ ನಾವು ಎದುರಿಸುವ ಹಿಂಜರಿತ, ನೋವು, ಸುಖ, ದುಃಖ ಮುಂತಾದವುಗಳಿಗೆ ಯಾವುದೇ ಗ್ರಹಚಾರ, ದೇವರು, ದೆವ್ವ ಕಾರಣವಲ್ಲ ನಾವೇ ಅದಕ್ಕೆಲ್ಲಾ ಜವಾಬ್ದಾರರು. ನಮ್ಮ ಸುಖ/ದುಃಖ ಗಳನ್ನು ಹೇಗೆ ನಾವೇ ಅನುಭವಿಸುತ್ತೇವೋ ಅದಕ್ಕೆ ಕಾರಣರೂ ನಾವೇ. ನಮ್ಮಿಂದ ಹೊರಗೆ ಇರುವ ಬೇರೆ ವಸ್ತು ಕಾರಣವಲ್ಲ ಎಂಬ ನಿತ್ಯ ಸತ್ಯವನ್ನು ಮನಗಾಣಿಸಿ ಕೊಡುವ, ನಾವೇ ಸೃಷ್ಟಿಸುವ ನಕಾರಾತ್ಮಕ ಭಾವನೆಗಳ ಅನುಭವ ನಮಗೆ ಬೇಡವಾದಲ್ಲಿ ಅದನ್ನು ತ್ಯಜಿಸುವ ಸ್ವಾತಂತ್ರ್ಯ ನಮ್ಮದಿದೆ ಅನ್ನುವ ಸತ್ಯವನ್ನು ತಿಳಿಸುವ ಈ ಪುಸ್ತಕ ಅದ್ಭುತ.
ಪುಸ್ತಕದ ಆರಂಭದಲ್ಲೇ ಲೇಖಕರು `ಎಲ್ಲಿಂದಾದರೂ ಓದಲು ಪ್ರಾರಂಭಿಸಿದರೆ ಸರಿಯಾದ ಅರ್ಥ ಆಗುವುದಕ್ಕಿಂತ ಹೆಚ್ಚಾಗಿ ಅಪಾರ್ಥ ಅನರ್ಥಗಳೇ ಆಗುವ ಸಂಭವವಿರುವುದರಿಂದ, ದಯಮಾಡಿ, ಈ ಪುಸ್ತಕವನ್ನು ಮೊದಲ ಪುಟದಿಂದ ಅನುಕ್ರಮವಾಗಿ ಓದಿ.‘ ಎಂದಿದ್ದಾರೆ. ಆದರೆ ಈ ಪುಸ್ತಕದ ವಿಶಾಲ ಹರಹನ್ನು ಹೇಳುವ ಉತ್ಸಾಹದಲ್ಲಿ ಅಲ್ಲೊಂದು ಇಲ್ಲೊಂದು ಮಾತುಗಳನ್ನು ಉದ್ಧರಿಸಿ ಇಲ್ಲಿ ಕೊಟ್ಟಿದ್ದೇನೆ. ಇದು ಈ ಪುಸ್ತಕದ ಲಾಭವನ್ನು ಎಲ್ಲರೂ ಪಡೆದುಕೊಳ್ಳಲಿ ಎನ್ನುವ ಸದಾಶಯದಿಂದ ಮಾಡಿದ ತಪ್ಪು. ಅದಕ್ಕಾಗಿ ಲೇಖಕರ ಕ್ಷಮೆಯನ್ನು ಇಲ್ಲಿ ಕೋರುತ್ತೇನೆ.
ಮತ್ತೊಮ್ಮೆ ಹೊಸ ವರ್ಷದಲ್ಲಿ ನೀವೆಲ್ಲ ಹೊಸ ಸಕಾರಾತ್ಮಕ ಅನುಭವ (ಸುಖ, ಸಂತೋಷ, ಉಲ್ಲಾಸ, ಸಮಾಧಾನ) ಗಳನ್ನು ಹೊಂದುವಲ್ಲಿ ಯಶಸ್ವಿಯಾಗಿರೆಂದು ಹಾರೈಸುವ
-ವಿಶಾಲಮತಿ
ಶೀರ್ಷಿಕೆ: ಮಾನಸಿಕ ಸಮಸ್ಯೆಗಳಿಗೆ `ಮನಸ್ಸು‘ ಇಲ್ಲದ ಮಾರ್ಗ ಲೇಖಕರು: ಡಾ.ಮೀನಗುಂಡಿ ಸುಬ್ರಹ್ಮಣ್ಯಂ ಪ್ರಕಾಶಕರು:ನವಕರ್ನಾಟಕ ಪ್ರಕಾಶನ ಪುಟಗಳು:312 ಬೆಲೆ:ರೂ.95/-
Filed under: ವೈದ್ಯಕೀಯ-ಮನಶ್ಯಾಸ್ತ್ Tagged: , , ,