ಶ್ರೇಷ್ಠ ಶಾಲೆಗೆ ಸೇರಿಸಿಬಿಟ್ಟರೆ, ಮಗುವಿಗೆ ಶ್ರೇಷ್ಠ ಶಿಕ್ಷಣ ಸಿಗುವುದಿಲ್ಲ
ಶಿಕ್ಷಣದ ಬಗ್ಗೆ ಯಾರು ಯೋಚಿಸಬೇಕು ಎಂಬ ಒಂದು ಮಹತ್ವದ ಪ್ರಶ್ನೆ ನಮ್ಮ ಮುಂದೆ ಯಾವಾಗಲೂ ಇದೆ. … ಶಿಕ್ಷಣದ ಬಗ್ಗೆ ಯಾರಾದರೂ ಯೋಚಿಸುತ್ತಿದ್ದರೆ ಅದು ನಮಗೆ ತಿಳಿಯುವುದು ಆ ಬಗ್ಗೆ ಬರೆಯುವುದರಿಂದ ಮತ್ತು ಆ ಬಗ್ಗೆ ಮಾತನಾಡುವವರಿಂದ. ನಮ್ಮ ಪ್ರಶ್ನೆ: ಇವತ್ತು ಆ ಕೆಲಸ ಎಷ್ಟು ಮಂದಿ ಮಾಡುತ್ತಿದ್ದಾರೆ? ಎಷ್ಟು ಮಂದಿ ಬರೆಯುತ್ತಿದ್ದಾರೆ? ಎಷ್ಟು ಸಂಶೋಧನೆ ನಡೆಯುತ್ತಿದೆ? ಎಷ್ಟು ಪುಸ್ತಕಗಳು ಪ್ರಕಟವಾಗುತ್ತಿವೆ? ಸಂಶೋಧನೆಗಳ ಬಗ್ಗೆ, ಪುಸ್ತಕಗಳ ಬಗ್ಗೆ ಎಷ್ಟು ಚರ್ಚೆ ನಡೆಯುತ್ತಿದೆ? ಅಮೆರಿಕಾ ಇಂಗ್ಲಂಡು ಜರ್ಮನಿಗಳಲ್ಲದೆ ಇತರ ಹಲವು ದೇಶಗಳಲ್ಲಿ ನಿರಂತರವಾಗಿ ನಡೆಯುವ ಈ ಕೆಲಸ ನಮ್ಮಲ್ಲಿ ಯಾಕೆ ನಡೆಯುತ್ತಿಲ್ಲ? ಇಷ್ಟರವರೆಗೆ ಆಗದಿದ್ದುದು ಇನ್ನು ಬೇಗನೆ ಆದೀತು ಎಂದು ನಂಬಿ ಕೂರಲು ಸಾಧ್ಯವಿಲ್ಲ. ಯಾಕೆಂದರೆ ಇದು ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ. ನಾಳೆ ನಾಡಿದ್ದರಲ್ಲಿ ಮುಗಿದುಹೋಗುವ ಉದ್ಯೋಗಾವಕಾಶಗಳಿಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ವಿದ್ಯಾಭ್ಯಾಸ ಸಾಕೆ? ಅದಕ್ಕಿಂತಲೂ ದೂರದ ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡಬೇಡವೇ? ಅಂಥ ಶಿಕ್ಷಣದ ಬಗ್ಗೆ ಯೋಚಿಸಬೇಕಾದ ಸ್ಥಿತಿ ಈಗ ನಿರ್ಮಾಣವಾಗಿಲ್ಲವೇ? ಯಾಕೆ ವಿಜ್ಞಾನ, ಇತಿಹಾಸ, ರಾಜಕಾರಣ, ಸಮಾಜ ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತ್ರ ಮುಂತಾದ್ದು ಮೂಲೆಗುಂಪಾಗಿದೆ? ಇವು ನಮಗೆ ಬೇಡವೇ? ಇವೆಲ್ಲ ನಮ್ಮ ಬದುಕಿಗೆ ಎಷ್ಟು ಅನಿವಾರ್ಯ ಎಂಬುದನ್ನು ಕಂಡುಕೊಳ್ಳಲು ಇಂದಿನ ಶಿಕ್ಷಣದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿಲ್ಲವೆ?
ಖಂಡಿತವಾಗಿಯೂ ಇದೆ. ಆದರೆ ಯಾರು ಮಾಡಬೇಕಾದ ಚಿಂತನೆ ಇದು? ಸದ್ಯದ ಸ್ಥಿತಿಯಲ್ಲಿ ಮಕ್ಕಳ ತಾಯಿತಂದೆಯರೇ ಇದನ್ನು ಮಾಡಬೇಕಾಗಿದೆ. ಶ್ರೇಷ್ಠ ಶಾಲೆಗೆ ಸೇರಿಸಿಬಿಟ್ಟರೆ, ಮಗುವಿಗೆ ಶ್ರೇಷ್ಠ ಶಿಕ್ಷಣ ಸಿಗುವುದಿಲ್ಲ ಎಂಬುದು ಸ್ಪಷ್ಟ. . . . .
ಮಗು ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿಯಾಗಿ, ಜವಾಬ್ದಾರಿಯುಳ್ಳ ಪ್ರಜೆಯಾಗಿ ಬದುಕಬೇಕು. ಸ್ವಾರ್ಥ ಸಾಧಕನೆನಿಸಿಕೊಳ್ಳದೆ, ಯಾರಿಗೂ ಹಿಂಸೆ ನೀಡದೆ, ಶಾಂತಿಯನ್ನು ಪ್ರೀತಿಸುವ, ಶಾಂತಿಯಿಂದ ಜೀವಿಸುವ ವ್ಯಕ್ತಿಯಾಗಿರಬೇಕು. ವಿದ್ಯಾಭ್ಯಾಸ ಅವನನ್ನು ಕೇವಲ ಬುದ್ಧಿವಂತನನ್ನಾಗಿಸಿದರೆ ಸಾಲದು; ಅವನ್ನು ಸನ್ನಡತೆಯವನ್ನಾಗಿಸಬೇಕು. ಅವನು ವಿವೇಕಶಾಲಿಯಾಗಿರಬೇಕು. ಪರಿಸರವನ್ನು ಪ್ರೀತಿಸುವವನಾಗಿರಬೇಕು. ಭೂತದಯೆಯುಳ್ಳವನಾಗಿರಬೇಕು. ಸಮ್ಯಕ್ ದೃಷ್ಟಿಯವನಾಗಿರಬೇಕು. ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕಲು ಇನ್ನೂ ಇಂಥ ಎಷ್ಟೋ ಗುಣಗಳು ಬೇಕು. ಇದು ಇವತ್ತು ಯಾವ ಶಿಕ್ಷಣ ಸಂಸ್ಥೆಯಲ್ಲಿ ಸಿಗುತ್ತದೆ? ಸಿಲೆಬಸಿನಲ್ಲಿ, ಯಾವ ಶಿಕ್ಷಣ ಕ್ರಮದಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ? ಈ ಪ್ರಶ್ನೆಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಸಿಗುವುದಿಲ್ಲ.
ಆದರೆ ಇದನ್ನೆಲ್ಲ ಮನೆಯಲ್ಲೇ ನೀಡಲು ಸಾಧ್ಯವಿದೆ. ತಾಯಿತಂದೆ ಸ್ವಲ್ಪ ಪ್ರಯತ್ನಿಸಿದರೆ, ಶಿಕ್ಷಣ ಕ್ರಮದಲ್ಲಿನ ಕೊರತೆಯನ್ನು ಮನೆಯಲ್ಲಿ ಸರಿಪಡಿಸಬಹುದು. ಮನೆಯೆಂಬುದು ಶಾಲೆಯಷ್ಟೇ ಮುಖ್ಯವಾದ ಶಿಕ್ಷಣ ಗೃಹವಾಗಬಹುದು. ಈ ದಿಸೆಯಲ್ಲಿ ಚಿಂತಿಸುವ ಕೆಲಸವನ್ನು ತಾಯಿತಂದೆಯರೇ ಮಾಡಬೇಕು.
ಈ ಆಶಯವನ್ನು ಪ್ರಧಾನವಾಗಿಟ್ಟುಕೊಂಡು ಈ ಪುಸ್ತಕವನ್ನು ಸಿದ್ಧಪಡಿಸಿದ್ದೇನೆ. ತಾಯಿ ತಂದೆಯರಿಗೆ ಮಾತ್ರ ಎಂದರೆ, ಇದು ಶಿಕ್ಷಕರಿಗಲ್ಲ, ಮುಂದೆ ತಾಯಿ ತಂದೆಯರಾಗುವವರಿಗಲ್ಲ ಎಂದರ್ಥವಲ್ಲ. `ಮಗು ಮನುಷ್ಯನ ತಂದೆ’ ಎಂಬ ಮಾತಿನಂತೆ ತಾಯಿ ತಂದೆಯರು ಎಂಬುದಕ್ಕೂ ಬಹಳ ವಿಶಾಲವಾದ ಅರ್ಥವಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.
ಇದೊಂದು ದ್ವಿಭಾಷೀ(A Bilingual) ಪುಸ್ತಕ. ಈ ಪುಸ್ತಕದಲ್ಲಿ 12 ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲಿಯೂ ಕೆಲವು ವಿಚಾರಗಳನ್ನು ಇಂಗ್ಲೀಷಿನಲ್ಲಿಯೂ ಕೆಲವು ವಿಚಾರಗಳನ್ನು ಕನ್ನಡದಲ್ಲಿಯೂ, ಮುಖ್ಯವಿಚಾರಗಳನ್ನು ಎರಡೂ ಭಾಷೆಗಳಲ್ಲಿಯೂ ಕೊಡಲಾಗಿದೆ. ಆದರೆ ಒಂದು ಇನ್ನೊಂದರ ನೇರ ಭಾಷಾಂತರವಾಗಿರುವುದಿಲ್ಲ. ಮುಖ್ಯ ಆಶಯವು ಮಾತ್ರಾ ಒಂದೇ ರೀತಿಯಾಗಿರುತ್ತದೆ.
-ಕೆ.ಟಿ.ಗಟ್ಟಿ (ಪುಸ್ತಕದ ಮುನ್ನುಡಿಯಿಂದ)
ಶೀರ್ಷಿಕೆ:ಗುರುಗಳಾಗಿ ತಾಯಿ-ತಂದೆ PARENTS AS EDUCATORS ಲೇಖಕರು:ಕೆ.ಟಿ.ಗಟ್ಟಿ ಪ್ರಕಾಶಕರು:ನವಕರ್ನಾಟಕ ಪ್ರಕಾಶನ ಪುಟ:216 ಬೆಲೆ:ರೂ.110/-
Filed under: ವೈಚಾರಿಕ ಸಾಹಿತ್ಯ, ಶೈಕ್ಷಣಿಕ ಸಾಹಿತ್ಯ | Tagged: ಕೆ.ಟಿ.ಗಟ್ಟಿ, ಗುರುಗಳಾಗಿ ತಾಯಿ-ತಂದೆ PARENTS AS EDUCATORS, ನವಕರ್ನಾಟಕ ಪ್ರಕಾಶನ
No comments:
Post a Comment