Saturday, February 5, 2011
Kannada Pustaka Prakashana Ghoshti Held at 77 Kannada Sahitya Sammelana on 4th Feb. 2011
ಕನ್ನಡ ಪುಸ್ತಕಗಳು ಕೇವಲ ಮುದ್ರಣದಲ್ಲಷ್ಟೇ ಇವೆ. ಇವುಗಳನ್ನು ಸಿ.ಡಿ., ಡಿ.ವಿ.ಡಿ., ಅಂತರ್ಜಾಲ ಮಾಧ್ಯಮದಲ್ಲೂ ಒದಗಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಪ್ರಕಾಶನ ಕ್ಷೇತ್ರ ಇತ್ಯಾತ್ಮಕವಾಗಿ ಸ್ವೀಕರಿಸಿ ಹೊಸ ಸವಾಲನ್ನು ಎದುರಿಸಲು ಸಿದ್ಧವಾಗಬೇಕು’
ಬೆಂಗಳೂರು: ‘ಪುಸ್ತಕಗಳ ಮುದ್ರಣಕ್ಕಾಗಿ ಬಳಸುವ ಕಾಗದವನ್ನು ಪ್ರಕಾಶನವನ್ನು ವೃತ್ತಿಯಾಗಿಸಿ ಸ್ವೀಕರಿಸಿದ ಪ್ರಕಾಶನ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಒದಗಿಸಬೇಕು’ ಎಂದು ಮನೋಹರ ಗ್ರಂಥಮಾಲದ ಮುಖ್ಯಸ್ಥ ರಮಾಕಾಂತ ಜೋಷಿ ಆಗ್ರಹಿಸಿದರು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನ್ನಡ ಪುಸ್ತಕೋದ್ಯಮ’ ಗೋಷ್ಠಿಯಲ್ಲಿ ‘ಪುಸ್ತಕನೀತಿ’ ಕುರಿತಂತೆ ಮಾತನಾಡಿದ ಅವರು ‘ರಿಯಾಯಿತಿ ದರದಲ್ಲಿ ಕಾಗದವನ್ನು ಒದಗಿಸುವಾಗ ಅದು ಪ್ರಕಾಶನವನ್ನು ವೃತ್ತಿಯಾಗಿ ಸ್ವೀಕರಿಸಿರುವ ಅನುಭವೀ ಪ್ರಕಾಶಕರಿಗೆ ಮಾತ್ರ ದೊರಕುವಂತೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಅದರ ದುರ್ಬಳಕೆಯ ಸಾಧ್ಯತೆಗಳೇ ಹೆಚ್ಚು’ ಎಂದು ಎಚ್ಚರಿಸಿದರು.‘ಸಣ್ಣ ಅಂಗಡಿಯನ್ನು ಕೂಡಾ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಆದರೆ ಪ್ರಕಾಶನ ಸಂಸ್ಥೆಗಳಿಗೆ ಇಂಥ ಯಾವುದೇ ಕಾನೂನುಗಳಿಲ್ಲ. ಯಾರು ಬೇಕಾದರೂ ಪುಸ್ತಕ ಪ್ರಕಟಿಸುವ ಅವಕಾಶವಿದೆ. ಇದನ್ನು ತಡೆಯಲು ಪ್ರಕಾಶನ ಸಂಸ್ಥೆಗಳನ್ನು ಕಡ್ಡಾಯವಾಗಿ ನೋಂದಾಯಿಸುವಂತೆ ಕಾನೂನು ರೂಪಿಸಬೇಕಾಗಿದೆ’ ಎಂದು ರಮಾಕಾಂತ ಜೋಷಿ ಅಭಿಪ್ರಾಯಪಟ್ಟರು.
‘ಗ್ರಂಥ ಸ್ವಾಮ್ಯ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು’ ಎಂದು ಒತ್ತಾಯಿಸಿದ ಅವರು ‘ಎಲ್ಲಾ ಹಸ್ತಪ್ರತಿಗಳನ್ನೂ ನೋಂದಾಯಿಸುವ ವ್ಯವಸ್ಥೆಯೊಂದಿರಬೇಕು. ಹಾಗೆಯೇ ಪ್ರಕಾಶಕರು ಮತ್ತು ಲೇಖಕರ ಮಧ್ಯೆ ಲಿಖಿತ ಒಪ್ಪಂದ ಮಾಡಿಕೊಳ್ಳುವ ವ್ಯವಸ್ಥೆಯನ್ನು ರೂಢಿಸಿಕೊಳ್ಳಬೇಕು’ ಎಂದರು.‘ಪುಸ್ತಕ ಪ್ರಕಾಶನವನ್ನು ಸರ್ಕಾರ ಇನ್ನೂ ಒಂದು ಉದ್ಯಮ ಎಂದು ಪರಿಗಣಿಸಿಲ್ಲ. ಪರಿಣಾಮವಾಗಿ ಪ್ರಕಾಶನ ಕ್ಷೇತ್ರಕ್ಕೆ ಉದ್ಯಮಗಳಿಗೆ ದೊರಕುವ ಯಾವ ಸವಲತ್ತೂ ದೊರೆಯುತ್ತಿಲ್ಲ. ಸರ್ಕಾರ ಇದನ್ನೂ ಒಂದು ಉದ್ದಿಮೆಯಾಗಿ ಪರಿಗಣಿಸಬೇಕು’ ಎಂದು ಅವರು ಆಗ್ರಹಿಸಿದರು.ಜನಸಂಖ್ಯೆ ಮತ್ತು ಪ್ರಕಟವಾಗುವ ಪುಸ್ತಕಗಳ ಸಂಖ್ಯೆಯ ರಾಷ್ಟ್ರೀಯ ಅನುಪಾತ ಪ್ರತೀ ಲಕ್ಷ ಜನಸಂಖ್ಯೆಗೆ ಎಂಟು ಪುಸ್ತಕಗಳಷ್ಟಿದೆ. ಕನ್ನಡದ ಸಂದರ್ಭಕ್ಕೆ ಬಂದಾಗ ಇದು ಲಕ್ಷ ಜನಸಂಖ್ಯೆಗೆ ಕೇವಲ 2.4ರಷ್ಟಿದೆ ಎಂದು ವಿಷಾದಿಸಿದ ಅವರು ಈ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಕನ್ನಡ ಓದುಗರ ಸಂಖ್ಯೆ ಹೆಚ್ಚಬೇಕಾಗಿದೆ ಎಂದರು.ಗೋಷ್ಠಿಯ ಆಶಯ ಭಾಷಣ ಮಾಡಿದ ನವಕರ್ನಾಟಕ ಪ್ರಕಾಶನದ ಎ.ರಮೇಶ್ ಉಡುಪ ಅವರು ‘ಕನ್ನಡದ ಪ್ರಕಾಶನ ಸಂಸ್ಥೆಗಳು ಕೇವಲ ಲೇಖಕನಿಂದ ಹಸ್ತಪ್ರತಿಯನ್ನು ಪಡೆದು ಮುದ್ರಿಸಿ ಮಾರಾಟಕ್ಕಿಡುವುದಕ್ಕಷ್ಟೇ ಸೀಮಿತವಾಗಿವೆ. ಓದುಗನ ಅಗತ್ಯಗಳನ್ನು ತಿಳಿದುಕೊಂಡು ಪುಸ್ತಕಗಳನ್ನು ಬರೆಯಿಸಿ ಪ್ರಕಟಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ’ ಎಂದರು.‘ಕನ್ನಡ ಪುಸ್ತಕಗಳು ಕೇವಲ ಮುದ್ರಣದಲ್ಲಷ್ಟೇ ಇವೆ. ಇವುಗಳನ್ನು ಸಿ.ಡಿ., ಡಿ.ವಿ.ಡಿ., ಅಂತರ್ಜಾಲ ಮಾಧ್ಯಮದಲ್ಲೂ ಒದಗಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಪ್ರಕಾಶನ ಕ್ಷೇತ್ರ ಇತ್ಯಾತ್ಮಕವಾಗಿ ಸ್ವೀಕರಿಸಿ ಹೊಸ ಸವಾಲನ್ನು ಎದುರಿಸಲು ಸಿದ್ಧವಾಗಬೇಕು’ ಎಂದರು.ಪ್ರಕಾಶಕರು ಮತ್ತು ಮಾರಾಟ ವ್ಯವಸ್ಥೆಯ ಕುರಿತ ಪ್ರಬಂಧ ಮಂಡಿಸಿದ ಟಿ.ಎಸ್.ಛಾಯಾಪತಿ ಅವರು ‘ಕನ್ನಡ ಪುಸ್ತಕಗಳನ್ನು ನಿಯತವಾಗಿ ಖರೀದಿಸುವ ಪ್ರಾಧಿಕಾರ, ಸರ್ಕಾರಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಗ್ರಂಥಾಲಯಗಳನ್ನು ಪ್ರಕಾಶಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ದಿನಪತ್ರಿಕೆಗಳಲ್ಲಿ ಪುಸ್ತಕಗಳ ಜಾಹೀರಾತಿಗೇ ರಿಯಾಯಿತಿ ದರವಿರಬೇಕು’ ಎಂದು ಒತ್ತಾಯಿಸಿದರು.ಕನ್ನಡ ಪುಸ್ತಕೋದ್ಯಮದ ಇತ್ತೀಚಿನ ಆತಂಕಗಳ ಕುರಿತಂತೆ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಕರೀಗೌಡ ಬೀಚನಹಳ್ಳಿ ‘ಯಾವ ಮಾಧ್ಯಮವೂ ಪುಸ್ತಕಕ್ಕೆ ಪರ್ಯಾಯವಾಗಲಾರದು. ಆದ್ದರಿಂದ ಪುಸ್ತಕೋದ್ಯಮದ ಆತಂಕದಲ್ಲಿದೆ ಎಂದು ಭಾವಿಸುವುದು ಸರಿಯಲ್ಲ’ ಎಂದರು.‘ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಸರ್ಕಾರದ ಅನುದಾನದ ನೆರವಿಲ್ಲದೆಯೇ ಯಶಸ್ವಿಯಾಗಿ ಪ್ರಕಾಶನವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಹಾಗೆಂದು ಅದು ಜನಪ್ರಿಯ ಪುಸ್ತಕಗಳನ್ನೇನೂ ಪ್ರಕಟಿಸುತ್ತಿಲ್ಲ. ವಿದ್ವತ್ಪೂರ್ಣ ಅಧ್ಯಯನಗಳನ್ನು ಓದುವವರ ಸಂಖ್ಯೆಯೂ ಸಾಕಷ್ಟಿದೆ ಎಂಬುದಕ್ಕೆ ಇದು ಸಾಕ್ಷಿ’ ಎಂದರು.ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ‘ರಿಯಾಯಿತಿ ದರದಲ್ಲಿ ವೃತ್ತಿ ಪ್ರಕಾಶಕರಿಗೆ ಕಾಗದ ಒದಗಿಸುವ ಪ್ರಸ್ತಾಪ ಈಗಾಗಲೇ ಸರ್ಕಾರದ ಮುಂದಿದೆ. ಅದಕ್ಕೆ ಒಪ್ಪಿಗೆ ದೊರೆಯುವ ಭರವಸೆ ನನಗಿದೆ’ ಎಂದರು.ಅನುಷಾ ಸಿಂಗ್ ಗೋಷ್ಠಿಯನ್ನು ನಿರೂಪಿಸಿದರೆ. ಕೆ.ಜಿ. ಕುಮಾರ್ ವಂದಿಸಿದರು.
No comments:
Post a Comment