Thursday, February 12, 2009

Book Review of Matheyaru Manyaragiddaga - by Dr. Deviprasad Chattopadhyaya


ಕೃಷಿ ಕಾರ್ಯ ಮೂಲತಃ ಸ್ತ್ರೀಯರ ಆವಿಷ್ಕಾರ

`ಮಾತೆಯರು ಮಾನ್ಯರಾಗಿದ್ದಾಗ‘ ಡಾ. ದೇವಿಪ್ರಸಾದ್ ಚಟ್ಟೋಪಧ್ಯಾಯರ ಪುಟ್ಟ ಅಂತೆಯೇ ವಿಚಾರ ಪ್ರಚೋದಕ ಪುಸ್ತಕ.
ಕೃಷಿಕಾರ್ಯದ ತಿಳುವಳಿಕೆಯಿಂದಲೇ ಎಲ್ಲ ನಾಗರೀಕತೆಗಳು ಉಗಮಗೊಂಡವು. ಈಜಿಪ್ಟ್, ಮೆಸಪಟೋಮಿಯ ಮತ್ತು ಮೊಹೆಂಜೋದಾರೋ - ಈ ಅಪರೂಪದ ಹಾಗೂ ವಿಸ್ಮಯಕರ ನಾಗರೀಕತೆಗಳೆಲ್ಲಾ ನದಿ ದಂಡೆಗಳ ಮೇಲೆಯೇ ಬೆಳೆದವಲ್ಲವೇ? ಕೃಷಿಕಾರ್ಯದ ತಿಳುವಳಿಕೆ ಖಗೋಳ ವಿಜ್ಞಾನದ, ತರುವಾಯ ಇತರ ವಿಜ್ಞಾನಗಳ ಆವಿಷ್ಕಾರಕ್ಕೆ ಕಾರಣವಾಯಿತು.
ಕೃಷಿ ಕೆಲಸದ ಆವಿಷ್ಕಾರವೇ ನಾಗರೀಕತೆಗಳ ಬುನಾದಿ ಎಂಬುದು ಸರಿಯಷ್ಟೆ. ಆದರೆ ಈ ಆವಿಷ್ಕಾರದ ಮೂಲ ಕಾರಣಕರ್ತರು ಯಾರು? ಪುರುಷರೋ? ಸ್ತ್ರೀಯರೋ? ಉತ್ತರ ಕೇಳಿದರೆ ಈಗಿನವರಾದ ನಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಕೃಷಿ ಕಾರ್ಯ ಮೂಲತಃ ಪುರುಷ ಆವಿಷ್ಕಾರವೇನೂ ಆಗಿರಲಿಲ್ಲ. ಅದು ಸ್ತ್ರೀಯರ ಆವಿಷ್ಕಾರ!
ಇಂಥ ಹಲವು ವಿಷಯಗಳನ್ನು ತಿಳಿಸಿಕೊಡುವ ಈ ಪುಸ್ತಕವನ್ನು ಕಲ್ಕತ್ತೆಯ ನ್ಯಾಷನಲ್ ಲೈಬ್ರರಿಯ ಶ್ರೀ ಜಿ.ಕುಮಾರಪ್ಪ ಅವರು ಬಂಗಾಳಿ ಭಾಷೆಯಿಂದ ಅನುವಾದಿಸಿದ್ದಾರೆ.
`ನಾವೀಗ ಮಾತೃಪ್ರಧಾನ ಸಮಾಜವನ್ನು ಮನಸ್ಸಿನಲ್ಲಿರಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ
ವೈದಿಕ ಕಾಲದ ಜನರ ವಿಚಾರವನ್ನು ಮೊದಲು ಆಲೋಚಿಸೋಣ. ಯಾವುದು ಅವರ ಜೀವನಾಧಾರದ ಮೂಲ ಉದ್ದೇಶವಾಗಿದ್ದಿತು? ಪಶುಪಾಲನೆ. ಅವರು ಕೃಷಿ ಕಾರ್ಯ ತಿಳಿದಿದ್ದರೇ? ತಿಳಿದಿದ್ದರೆ, ಎಷ್ಟರ ಮಟ್ಟಿಗೆ? ಇದರ ಬಗ್ಗೆ ವಿಭಿನ್ನವಾದ ಚಚರ್ೆಗಳಿವೆ. ಆದರೆ ಅವರ ಜೀವನೋಪಾಯಕ್ಕೆ ಆದಿ ಕಾಲದಲ್ಲಿ ವ್ಯವಸಾಯವು ಮೂಲ ಉದ್ಯೋಗವಾಗಿರಲಿಲ್ಲ. ಬದಲಾಗಿ ಪಶುಪಾಲನೆ ಎನ್ನುವ ವಿಚಾರದಲ್ಲಿ ಯಾವುದೇ ಸಂದೇಹಗಳಿಲ್ಲ.
ಇದು ಸರಿ ಇದ್ದಲ್ಲಿ, ಅವರ ಸಮಾಜದ ಲಕ್ಷಣಗಳು ಹೇಗಿದ್ದವು? ಆ ಸಮಾಜ ಪಿತೃ ಪ್ರಧಾನ ಸಮಾಜವಾಗಿದ್ದಿತು. ಆ ಸಮಾಜದ ಮನುಷ್ಯನು ಕಲ್ಪಿಸಿದ ದೇವಾನುದೇವತೆಗಳಲ್ಲಿ ದೇವನು ದೊಡ್ಡವನೋ? ಅಥವಾ ದೇವಿಯೋ? ನಿಶ್ಚಯವಾಗಿಯೂ ಪುರುಷ ದೇವತೆಗಳು ಅಗ್ರಸ್ಥಾನದಲ್ಲಿದ್ದಾರೆ. …. …. ….
ಆದರೆ ಭಾರತೀಯ ಸಂಸ್ಕೃತಿ ಎಂದು ಹೇಳುವಲ್ಲಿ ವಾಸ್ತವವಾಗಿ ವೈದಿಕ ಕಾಲದ ಕಾಣಿಕೆ ಎಷ್ಟು? ಬಹಳ ಕಡಿಮೆ. ನಮ್ಮ ಬಂಗಾಳದ ಅಥವಾ ಯಾವುದೇ ಬೇರೆ ಭಾಗದ ವಿಚಾರವನ್ನೇ ನೋಡುವಾ. ದುರ್ಗಾ, ಕಾಳಿ, ಜಗದ್ಧಾತ್ರಿ, ಅನ್ನಪೂರ್ಣಾ, ಲಕ್ಷ್ಮಿ - ಇನ್ನಷ್ಟು. ಇವರೆಲ್ಲಾ ದೇವಿಯರು, ದೇವರುಗಳಲ್ಲ. ಅಲ್ಲದೆ, ವೇದಕಾಲದ ದೇವಗಣದೊಂದಿಗೆ ಇವರ ಸಂಪರ್ಕ ಹೆಚ್ಚೇನೂ ಇಲ್ಲ. ವಾಸ್ತವವಾಗಿ, ವೇದಕಾಲದ ಈ ಪುರುಷ ದೇವತೆಗಳು ದೇಶದ ಜನರ ಮನಸ್ಸಿನಲ್ಲಿ ಸ್ಥಾನವನ್ನೇನೂ ಗಳಿಸಿಕೊಂಡಿಲ್ಲ. ಇಂದ್ರ, ಮಿತ್ರ, ವರುಣ, ಪೂಷನ್, ಮಾತರಿಶ್ವನ್, ಅಗ್ನಿ ಮುಂತಾದವರೆಲ್ಲರನ್ನೂ ಕುರಿತು ತಲೆ ಕೆಡಿಸಿಕೊಳ್ಳುತ್ತಿರುವವರು ಕೇವಲ ಪಂಡಿತರು ಮಾತ್ರ.
ಖಾಸಿಯರನ್ನು ಕುರಿತು ಆಲೋಚಿಸುವಾಗ ನಾವು ಒಂದು ವಿಚಾರವನ್ನು ಕಂಡುಕೊಂಡಿದ್ದೇವೆ: ದೇವ-ದೇವತೆಗಳ ವಿಚಾರ ಎಷ್ಟು ಮುಖ್ಯ ಎನ್ನುವುದೇ ಆ ವಿಚಾರ. ಆ ದೇವರುಗಳಲ್ಲಿ ಪುರುಷ ದೇವತೆಗಳ ಮಹಾತ್ಮೆಯನ್ನು ಸ್ತ್ರೀ ದೇವತೆಗಳ ಮಹಾತ್ಮೆ ಮುಚ್ಚಿ ಹಾಕಿದ್ದಲ್ಲಿ, ಮಾತೃಪ್ರಧಾನ ಸಮಾಜದ ಸ್ಮೃತಿ ಇದರ ಹಿನ್ನೆಲೆಯಲ್ಲಿ ಅಡಗಿದೆ, ಎಂದು ನಾವು ಸಂದೇಹ ಪಡಬೇಕಾಗಿದೆ.
… … ….
ಭಾರತೀಯ ನಾಗರೀಕತೆಯ ಮೂಲದಲ್ಲಿ ಮಾತೃ ಪ್ರಧಾನ ಸಮಾಜದ ಇತಿಹಾಸವಿರುವ ಕಾರಣವು ಅಸ್ಪಷ್ಟವೇನೂ ಅಲ್ಲ. …‘
ಹೀಗೆ ಕಾರಣ ಸಹಿತವಾಗಿ ಮಾನವ ನಾಗರೀಕತೆಗೆ ಮಹಿಳೆಯ ಪಾತ್ರ ಬಹು ದೊಡ್ಡದು ಎಂದು ಈ ಪುಸ್ತಕದಲ್ಲಿ ಪ್ರತಿಪಾದಿತವಾಗಿದೆ. ಅಲ್ಲದೆ ಸ್ತ್ರೀ ಪ್ರಧಾನ ಸಮಾಜ ಹೇಗೆ ಪುರುಷ ಪ್ರಧಾನವಾಗಿ ಮಾರ್ಪಡುತ್ತದೆ ಹಾಗೇ ಪುರುಷ ಪ್ರಧಾನವಾಗಿದ್ದ ಸಮಾಜ ಹೇಗೆ ಸ್ತ್ರೀ ಪ್ರಧಾನವಾಗಿ ಮಾರ್ಪಡುತ್ತದೆ ಎನ್ನುವುದು ಈ ಪುಸ್ತಕದಿಂದ ನಾವು ತಿಳಿಯಬಹದುದು. ಆ ತಿಳುವಳಿಕೆಯ ಆಧಾರದಲ್ಲಿ ಪುರುಷ ಪ್ರಧಾನ ಅಥವಾ ಸ್ತ್ರೀ ಪ್ರಧಾನ ಸಂಸ್ಕೃತಿಯನ್ನು ಹಿಂದೆ ಬಿಟ್ಟು ಲಿಂಗ ಭೇದವಿಲ್ಲದ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಈ ಪುಸ್ತಕ ಓದಿದಾಗ ನನಗೆ ಅನಿಸಿದ ಭಾವನೆ.
- ವಿಶಾಲಮತಿ
ಶೀರ್ಷಿಕೆ: ಮಾತೆಯರು ಮಾನ್ಯರಾಗಿದ್ದಾಗ ಲೇಖಕರು: ಡಾ.ದೇವಿಪ್ರಸಾದ್ ಚಟ್ಟೋಪಧ್ಯಾಯ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟಗಳು:55 ಬೆಲೆ:ರೂ.20/

http://pusthakapreethi.wordpress.com/
ಕೃಷಿ ಕಾರ್ಯ ಮೂಲತಃ ಸ್ತ್ರೀಯರ ಆವಿಷ್ಕಾರ