Thursday, December 9, 2010

Saturday, November 20, 2010

Ranganayakamma - The First Lady Aeronautical Engineer of Karnataka - Article by Nemichandra in Prajavani Bhoomika 20 Nov 2010





ಪ್ರಜಾವಾಣಿ » ಭೂಮಿಕಾ



ಕರ್ನಾಟಕದ ಪ್ರಥಮ ಮಹಿಳಾಏರೋನಾಟಿಕಲ್‌ಎಂಜಿನಿಯರ್

ರಂಗನಾಯಕಮ್ಮ

ನೇಮಿಚಂದ್ರ



ಮೈಸೂರು ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಎಂಜಿನಿಯರ್ ರಂಗನಾಯಕಮ್ಮ. ಅರ್ಧ ಶತಮಾನದ ಹಿಂದೆ ಹಲವು ಬಗೆಯ ಪೂರ್ವಗ್ರಹಗಳ ನಡುವೆಯೂ ಹೆಣ್ಣುಮಗಳೊಬ್ಬಳು ತನಗೆ ಇಷ್ಟವಾದ ರಂಗದಲ್ಲಿ ಪ್ರವೇಶ ಪಡೆದು,ಅಡೆತಡೆಗಳನ್ನೆಲ್ಲ ದಾಟಿ, ಸಾಧನೆಯ ಶಿಖರವೇರಿದ್ದು ಅಪೂರ್ವ.


ವಾಯುಮಂಡಲದ ಅಧ್ಯಯನಕ್ಕಾಗಿ ಬಳಸುವ ‘ಮೈಕ್ರೋ ಪಲ್ಸ್ ಲಿಡಾರ್’ ಉಪಕರಣದ ರೂವಾರಿ ...

ನಾನು ಶಾಲೆ ಓದಿದ ಕಾಲದಲ್ಲಿ ನನ್ನೆದುರು ಸ್ಫೂರ್ತಿ ನೀಡುವಂತಹ ಮಹಿಳಾ ಮಾದರಿಗಳಿರಲಿಲ್ಲ. ಶಾಲೆಯಲ್ಲಿ ನಾನು ಓದಿದ ಯಾವ ಪುಸ್ತಕದಲ್ಲೂ ಮಹಿಳಾ ಸಾಧಕಿಯರ ಉಲ್ಲೇಖವಿರಲಿಲ್ಲ. ನಾನು ಹತ್ತನೇ ತರಗತಿಯಲ್ಲಿದ್ದ ಸಮಯ, ನನ್ನ ತಂದೆಯವರ ಗ್ರಂಥಾಲಯದಲ್ಲಿದ್ದ ಮೇರಿ ಕ್ಯೂರಿಯನ್ನು ಕುರಿತ ಪುಟ್ಟ ಪುಸ್ತಕವನ್ನು ಓದಿದ್ದೆ. ಆಕೆಯ ಅಸಾಧಾರಣ ಬದುಕು ಆ ಎಳೆಯ ವಯಸ್ಸಿನಲ್ಲಿ ಎಲ್ಲಿಲ್ಲದ ಪ್ರಭಾವ ಬೀರಿದ ನೆನಪಿದೆ. ಆದರೆ ಆಕೆಯೊಬ್ಬಳೇ ಮಹಿಳಾ ವಿಜ್ಞಾನಿ, ಆಕೆ ಕೂಡ ಕೇವಲ ಅಪವಾದ ಎಂಬ ನಿಲುವಿತ್ತು.

ಇಸವಿ 1976. ನಾನು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿ, ಮೂವತ್ತು ವರ್ಷಗಳ ಹಿಂದೆಯೇ ಸ್ಥಾಪಿತವಾಗಿದ್ದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ಗೆ ಸೇರಲು ಹೊರಟಿದ್ದೆ. ಆಗಿನ್ನೂ ಹೆಣ್ಣು ಮಕ್ಕಳು ಶಿಕ್ಷಕರಾಗುವುದು, ವೈದ್ಯರಾಗುವುದು ಸಾಮಾನ್ಯವಿತ್ತು. ಆದರೆ ನನ್ನ ಸುತ್ತಮುತ್ತ ಎಲ್ಲೂ, ಓರ್ವ ಮಹಿಳಾ ಎಂಜಿನಿಯರ್ ಕಣ್ಣಿಗೆ ಬಿದ್ದಿರಲಿಲ್ಲ. ಅದು ಏನಿದ್ದರೂ ಪುರುಷರ ರಂಗ ಎಂದು ಭಾವಿಸಲಾಗಿತ್ತು.


ಹಾಗೆಂದೇ ಎಂಜಿನಿಯರಿಂಗ್ ರಂಗವನ್ನು ಪ್ರವೇಶಿಸುವಾಗ ನನ್ನಲ್ಲಿ ಸಾಕಷ್ಟು ಅಳುಕು ಆತಂಕವಿತ್ತು. ಇವೆಲ್ಲ ಹೆಂಗಸರ ರಂಗವಲ್ಲ. ಕಾರ್ಪೆಂಟ್ರಿ ಇರುತ್ತೆ, ಫೌಂಡ್ರಿ ಇರುತ್ತೆ, ಮಷೀನ್ ಶಾಪ್ ಇರುತ್ತೆ ಎಂದೆಲ್ಲ ಹೆದರಿಸಿದವರಿದ್ದರು. ಅಳುಕುತ್ತಾ ಒಳಹೊಕ್ಕ ನಾನು ಮತ್ತು ನನ್ನ ಇಬ್ಬರು ಗೆಳತಿಯರು ವಿಶ್ವವಿದ್ಯಾಲಯಕ್ಕೆ ರ್ಯಾಂಕ್ ಪಡೆದು ಹೊರಬಂದಾಗಲೆ, ಅಲ್ಲಿ ಹೆಣ್ಣು ಮಕ್ಕಳಿಗೆ ಅಸಾಧ್ಯವಾದ ಅದ್ಭುತವೇನೂ ಇರಲಿಲ್ಲವೆಂದು ಅರಿವಾದದ್ದು!

ನಾವು ಸೇರಿದಾಗ ಸೆಮಿಸ್ಟರ್ ಸ್ಕೀಮ್ ಆರಂಭವಾಗಿದ್ದರೂ, ಐದು ವರ್ಷಗಳ ಎಂಜಿನಿಯರಿಂಗ್ ಕೋರ್ಸ್ ಅದಾಗಿತ್ತು. ಎಲೆಕ್ಟ್ರಾನಿಕ್ಸ್ ರಂಗಕ್ಕೆ ಪ್ರವೇಶಿಸಿದ್ದೆ. ತರಗತಿಯಲ್ಲಿ ಮೂರು ಜನ ಮಾತ್ರ ಹುಡುಗಿಯರು. ಇಡೀ ಕಾಲೇಜಿನಲ್ಲಿ ಕೂಡಾ ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳಿದ್ದರು. ಅದು ಕಂಪ್ಯೂಟರ್, ಐ.ಟಿ. ರಂಗದ ಕಾಲವಲ್ಲ. ಐದು ವರ್ಷ ಓದಿ ‘ಎಲೆಕ್ಟ್ರಾನಿಕ್ಸ್’ ವಿಷಯದಲ್ಲಿ ಬಿ.ಇ. ಪದವಿ ಪಡೆದರೂ, ನಾವು ಒಂದೇ ಒಂದು ಕಂಪ್ಯೂಟರನ್ನು ನೋಡಿರಲಿಲ್ಲ. ಕಾರಣ ಇಡೀ ಮೈಸೂರಿನಲ್ಲಿಯೇ ಆಗ ಒಂದು ಕಂಪ್ಯೂಟರ್ ಇರಲಿಲ್ಲ. ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ‘ಡೆಕ್10 ಕಂಪ್ಯೂಟರ್’ ಇರುವುದರ ಬಗ್ಗೆ ಕೇಳಿದ್ದೆ. ಅದನ್ನು ನೋಡಲೆಂದೇ ಬೆಂಗಳೂರಿಗೆ ಬಂದದ್ದುಂಟು!

ರಂಗನಾಯಕಮ್ಮ’ನೆಂಬ ದಂತಕಥೆ
ಕಾಲೇಜಿನಲ್ಲಿ ಮೊದಲ ವರ್ಷವೇ ಕಾರ್ಪೆಂಟರಿ ಇತ್ತು. ಲಂಗ ಹಾಕಿ ಕಾಲೇಜಿಗೆ ಹೋಗುತ್ತಿದ್ದ ನಮಗೆ, ಒಂದು ಕಾಲು ಮೇಲೆ ಎತ್ತಿ ವರ್ಕ್ ಬೆಂಚಿನ ಮೇಲೆ ಇಟ್ಟು, ಹತ್ತರಿ ಹೊಡೆಯುವುದು, ಉಳಿ ಉಪಯೋಗಿಸುವುದು ಸುಲಭವಿರಲಿಲ್ಲ. ಗರಗಸದಿಂದ ಕಬ್ಬಿಣದ ಚೂರನ್ನು ಕತ್ತರಿಸುವುದಕ್ಕೂ, ಸಣ್ಣಗೆ ಒಣಗಿಕೊಂಡಿದ್ದ ನನ್ನ ಕೈ ಸೋತು ಬರುತ್ತಿತ್ತು. ವೆಲ್ಡಿಂಗ್, ಫೌಂಡ್ರಿ ಎಲ್ಲವೂ ಇದ್ದ ಸಮಯ. ಆದರೆ ಮೊದಲ ವರ್ಷದ ಇವು ಯಾವುವೂ ನಮ್ಮನ್ನು ಹೆದರಿಸಲಿಲ್ಲ. ಅತ್ಯಧಿಕ ಅಂಕಗಳನ್ನು ಮೊದಲ ವರ್ಷದಿಂದಲೇ ಪಡೆಯಲು ಆರಂಭಿಸಿದ್ದೆವು. ಕಾರಣ ಅಳುಕುತ್ತಾ ಎಂಜಿನಿಯರಿಂಗ್ ಕಾಲೇಜನ್ನು ನಾವು ಹೊಕ್ಕಿದ್ದರೂ, ಕಾಲೇಜು ಸೇರಿದೊಡನೆ ನಮ್ಮ ಕಿವಿಗೆ ಬಿದ್ದ ಹೆಸರು ’ರಂಗನಾಯಕಮ್ಮ’. ಆಕೆ ಒಂದು ದಂತಕತೆಯಾಗಿದ್ದಳು.

’ರಂಗನಾಯಕಮ್ಮನ ರೆಕಾರ್ಡ್ ಯಾರೂ ಮುರಿದಿಲ್ಲ’ ಎಂಬ ಮಾತು ಕಾಲೇಜಿನಲ್ಲಿ ಕೇಳಿ ಬರುತ್ತಿತ್ತು. ಅದು ಬಹುಪಾಲು, ಎಂಜಿನಿಯರಿಂಗ್ ಡ್ರಾಯಿಂಗ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಅಪ್ರಮೇಯ ಮಾಸ್ತರರ ಬಾಯಲ್ಲಿ. ಅವರಂತೂ ಬೋರ್ಡಿನ ಮೇಲೆ ಸ್ಕೇಲ್ ಇಲ್ಲದೆಯೇ ಅದೆಂಥಾ ನೇರ ಗೆರೆಗಳನ್ನು ಎಳೆದು ಡ್ರಾಯಿಂಗ್ ಬಿಡಿಸುತ್ತಿದ್ದರೆಂದರೆ, ನಾವೆಲ್ಲ ಆಶ್ಚರ್ಯ ಚಕಿತರಾಗುತ್ತಿದ್ದೆವು. ನಮ್ಮ ಉದ್ಗಾರ ಕೇಳಿದಾಗೆಲ್ಲ ಅವರು ರಂಗನಾಯಕಮ್ಮನ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರು, ಆಕೆ ಅದೆಷ್ಟು ನಿಖರವಾಗಿ ಚಂದವಾಗಿ ಡ್ರಾಯಿಂಗ್ ಮಾಡುತ್ತಿದ್ದರು ಎಂದು ವಿವರಿಸುತ್ತಿದ್ದರು. ದಶಕಕ್ಕೂ ಹಿಂದೆ ಪಾಸಾದ ಓರ್ವ ವಿದ್ಯಾರ್ಥಿನಿಯ ಬಗ್ಗೆ ಮಾಸ್ತರರೊಬ್ಬರು ನೆನಪಿಟ್ಟುಕೊಂಡು ಮಾತನಾಡಬೇಕೆಂದರೆ, ಆಕೆ ನಿಜಕ್ಕೂ ಅಪೂರ್ವ ವ್ಯಕ್ತಿಯೇ ಆಗಿರಬೇಕೆಂದು ನನಗೆ ಅನಿಸುತ್ತಿತ್ತು. ನಾವ್ಯಾರೂ ನೋಡದೆಯೂ, ನಮ್ಮೊಳಗೆ ನಮ್ಮ ಸಾಮರ್ಥ್ಯದ ಅರಿವು ಮಾಡಿಸಿದ ರಂಗನಾಯಕಮ್ಮ, ಹಿನ್ನೆಲೆಯಲ್ಲೆಲ್ಲೋ ನಮಗೆ ಸ್ಫೂರ್ತಿಯಾಗಿದ್ದರು.

ನಮ್ಮ ಈ ಐದು ವರ್ಷಗಳ ಎಂಜಿನಿಯರಿಂಗ್ ಪಯಣದಲ್ಲಿ ರಂಗನಾಯಕಮ್ಮನ ಹೆಸರು ಜೊತೆಗಿತ್ತು. ಆದರೆ ಅವರ ಬಗ್ಗೆ ಹೆಚ್ಚಿನ ವಿವರಗಳು ನಮಗೆ ತಿಳಿದಿರಲಿಲ್ಲ. ಕಾಲೇಜಿನ ಸಮಯದಲ್ಲಿ ನಮ್ಮ ಕಿವಿಗೆ ಬಿದ್ದ

ವಿವರಗಳು ಇಷ್ಟೆ. ಆಕೆ ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವರು, ತಂದೆ ತಾಯಿ ಬೇಗನೆ ತೀರಿಕೊಂಡರು. ಒಂಟಿಕೊಪ್ಪಲದಿಂದ ಸೈಕಲ್ ತುಳಿದುಕೊಂಡು ಬರುತ್ತಿದ್ದರು. ಅದ್ಭುತವಾಗಿ ಎಂಜಿನಿಯರಿಂಗ್ ಡ್ರಾಯಿಂಗ್ ಬಿಡಿಸುತ್ತಿದ್ದರು.

ಆಕೆ 1965ರಲ್ಲಿ ಪದವಿ ಪಡೆದರು. ಪ್ರತಿ ವರ್ಷವೂ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಬಂದು, ಅಂತಿಮ ವರ್ಷದಲ್ಲಿ ಪ್ರಪ್ರಥಮ ಸ್ಥಾನ ಪಡೆದು ಉತ್ತೀರ್ಣರಾಗಿ ಸ್ವರ್ಣಪದಕ ಪಡೆದರು. ಅವರ ರೆಕಾರ್ಡ್ ಇಲ್ಲಿಯವರೆಗೂ ಯಾರೂ ಮುರಿದಿಲ್ಲ.

ಇಷ್ಟೆ ವಿವರಗಳು ತಿಳಿದದ್ದು. ಆದರೆ ಇಷ್ಟು ಸಾಕಿತ್ತು ನನ್ನಂತಹ ಎಳೆಯ ಹುಡುಗಿಯರಿಗೆ ‘ಎಂಜಿನಿಯರಿಂಗ್ ರಂಗ ನಮ್ಮ ಸಾಮರ್ಥ್ಯಕ್ಕೆ ಮೀರಿದ್ದಲ್ಲ, ಇದು ನಮ್ಮ ಹಕ್ಕಿನ ರಂಗ’ ಎಂಬ ಭಾವನೆ, ಭರವಸೆ, ಆತ್ಮವಿಶ್ವಾಸ ಮೂಡಿಸಲು. ಒಬ್ಬ ಬಡ ಹೆಣ್ಣುಮಗಳು ಈ ರಂಗದಲ್ಲಿ ಅಷ್ಟೆಲ್ಲ ಸಾಧಿಸಿದಳು ಎಂದ ಮೇಲೆ, ಎಷ್ಟು ಬೇಕಾದರೂ ಓದಮ್ಮ ಎಂದು ಬೆನ್ನಿಗೆ ನಿಂತ ತಂದೆ-ತಾಯಿಯರನ್ನು ಹೊಂದಿದ ನನ್ನಂತಹ ವಿದ್ಯಾರ್ಥಿನಿಯರು ಯಾವುದಕ್ಕೂ ಹೆದರಬೇಕಿರಲಿಲ್ಲ.

ರಂಗನಾಯಕಮ್ಮ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದು, ಹಾಗಾಗಿ ಕಬ್ಬಿಣದ ಕೆಲಸ ಮಾಡಿದ್ದರು, ಬಡಗಿಯಾಗಿ ಹತ್ತರಿಯನ್ನೂ ಹೊಡೆದಿದ್ದರು, ಲೇತ್ ಬಳಸಿದ್ದರು.

ಮಂಚೂಣಿಯ ಹೆಂಗಳೆಯರು

ಎಂಜಿನಿಯರಿಂಗ್ ತರಗತಿಯಲ್ಲಿನ ಏಕೈಕ ವಿದ್ಯಾರ್ಥಿನಿ...

ಪ್ರತಿ ರಂಗದಲ್ಲಿ ಮುಂಚೂಣಿಯಲ್ಲಿ ನಿಂತ ಹೆಣ್ಣು ಮಕ್ಕಳ ಮೇಲೆ ಅತ್ಯಂತ ದೊಡ್ಡ ಜವಾಬ್ದಾರಿ ಇರುತ್ತದೆ. ಇವರೇನಾದರೂ ತಾವು ಗುದ್ದಾಡಿ ಪೂರ್ವಗ್ರಹದ ಜೊತೆಯಲ್ಲಿ ಹೋರಾಡಿ ಪುರುಷರ ಹಕ್ಕಿನ ರಂಗಕ್ಕೆ ಪ್ರವೇಶ ಪಡೆದು, ನಂತರ ಅಲ್ಲಿ ಸರಿಯಾಗಿ ಓದಲಿಲ್ಲ, ಪಾಸಾಗಲಿಲ್ಲ ಎಂದರೆ ತಕ್ಷಣ ನಿರ್ಣಯಿಸಿ ಬಿಡುತ್ತಾರೆ - ಅದಕ್ಕೆ ಹೇಳಿದ್ದು ಇದೆಲ್ಲ ಹೆಂಗಸರ ರಂಗವಲ್ಲ ಎಂದು. ಒಬ್ಬ ಮಹಿಳೆಯ ಸೋಲನ್ನು, ಇಡೀ ಮಹಿಳಾ ಸಮುದಾಯದ ಸೋಲಾಗಿ ಪರಿಗಣಿಸಿಬಿಡಬಲ್ಲ ಚಾರಿತ್ರಿಕ ಸಂದರ್ಭದಲ್ಲಿ, ರಂಗನಾಯಕಮ್ಮ ಕೇವಲ ಮಹಿಳಾ ಸಾಮರ್ಥ್ಯವನ್ನು ಮೆರೆದದ್ದಲ್ಲದೆ, ಆಯ್ದ ರಂಗದಲ್ಲಿ ಆಸ್ಥೆ, ಆಸಕ್ತಿ, ಪರಿಶ್ರಮ ಇದ್ದಲ್ಲಿ ಬಡತನ, ಸ್ತ್ರೀತನ ಯಾವುದೂ ಗುರಿ ಮುಟ್ಟಲು ತಡೆಯಾಗಬೇಕಿಲ್ಲ ಎಂದು ಸಾಧಿಸಿ ತೋರಿಸಿದರು.

ಮೈಸೂರಿನಲ್ಲಿ ಬಿ.ಇ. ಮುಗಿಸಿ, ಸಂಶೋಧನೆಗೆಂದು ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌ಗೆ ನಾನು ಬಂದ ಹೊತ್ತು ಮಹಿಳೆ ವಿಜ್ಞಾನ ರಂಗದಲ್ಲಿ ಏಕೆ ಅಲ್ಪಸಂಖ್ಯಾತಳು ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ನಂತರದ ವರ್ಷಗಳಲ್ಲಿ ಮಹಿಳಾ ವಿಜ್ಞಾನಿಗಳು, ಮಹಿಳಾ ಎಂಜಿನಿಯರುಗಳು, ಮಹಿಳಾ ವೈಮಾನಿಕರು, ಮಹಿಳಾ ವೈದ್ಯರ ಪರಂಪರೆಯನ್ನು ಪುನರ್‌ರಚಿಸುವುದು ನನ್ನ ವೈಯಕ್ತಿಕ ಗೀಳಾಗಿ, ದೇಶ ವಿದೇಶಗಳನ್ನು ಸುತ್ತಿ ಮಾಹಿತಿ ಸಂಗ್ರಹಿಸಿ ಬರೆಯ ಹೊರಟಂತೆ, ಅನೇಕ ಬಾರಿ ರಂಗನಾಯಕಮ್ಮನ ನೆನಪು ಬರುತ್ತಿತ್ತು. ಅವರನ್ನು ಕುರಿತು ಮಾಹಿತಿಗಾಗಿ ಓಡಾಡಿದ್ದೆ. ನಾನು ಮೈಸೂರಿನಲ್ಲಿ ಇದ್ದ ಹೊತ್ತು, ಅವರು ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟಿನಲ್ಲಿದ್ದಾರೆ ಎಂದು ಕೇಳಿ ಬಂದಿತ್ತು. ಆದರೆ ಟಾಟಾ ಇನ್‌ಸ್ಟಿಟ್ಯೂಟಿಗೆ ನಾನು ಬಂದು ವಿಚಾರಿಸಿದಾಗ, ಅವರು ಅಲ್ಲಿರಲಿಲ್ಲ. ನಾನು ’ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ ಕಾರ್ಖಾನೆಗೆ ಸೇರಿದ್ದ ಹೊತ್ತು, ರಂಗನಾಯಕಮ್ಮ ಹತ್ತಿರದ ’ಏರೋನಾಟಿಕಲ್ ಡಿಫೆನ್ಸ್ ಎಸ್ಟಾಬ್ಲಿಷ್‌ಮೆಂಟ್’ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ನಾನು ಎ.ಡಿ.ಇ.ಗೆ ಹುಡುಕಿ ಹೋದಾಗ, ಅವರು ಚಾಲಕ ರಹಿತ ವಿಮಾನಗಳಾದ ‘ಲಕ್ಷ್ಯ’ ಮತ್ತು ‘ನಿಶಾಂತ್’ ಯೋಜನೆಗಳಲ್ಲಿ ಕೆಲಸ ಮಾಡಿದ್ದು ತಿಳಿದು ಬಂದರೂ, ಅವರಾಗಲೆ ಅಷ್ಟು ಹೊತ್ತಿಗೆ ಅಮೆರಿಕಗೆ ಹೊರಟು ಹೋಗಿದ್ದರು. ಎಂದಾದರೂ ರಂಗನಾಯಕಮ್ಮನವರನ್ನು ಭೇಟಿಯಾಗಬೇಕು, ಅವರ ಬಗ್ಗೆ ಹೆಚ್ಚು ತಿಳಿಯಬೇಕು ಎಂಬ ಆಕಾಂಕ್ಷೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಇದ್ದೇ ಇತ್ತು.

ಹಾಗೆಂದೇ ಮಯೂರ ಮೇಡಂ ಅವರ ‘ರಂಗನಾಯಕಮ್ಮ’ನನ್ನು ಕುರಿತ ಪುಸ್ತಕದ ಹಸ್ತಪ್ರತಿ ನನ್ನ ಕೈಗೆ ಬಂದಾಗ ಸಂತಸ ಹೇಳತೀರದು. ಕಾಲು ಶತಮಾನಕ್ಕೂ ಹಿಂದೆ, ಅಳುಕುತ್ತಾ ಒಳಹೊಕ್ಕ ಸಣ್ಣ ಊರಿನ ನನ್ನಂತಹ ಹೆಣ್ಣುಮಕ್ಕಳಿಗೆ ಸ್ಫೂರ್ತಿ ನೀಡಿದ್ದ, ಮೈಸೂರು ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಎಂಜಿನಿಯರ್ ಕುರಿತು, ಇಷ್ಟು ವರ್ಷಗಳ ಮೇಲಾದರೂ ಒಂದು ಪುಸ್ತಕ ಹೊರ ಬರುತ್ತಿರುವುದು ನನಗೆ ತೀವ್ರ ಸಂತೋಷದ ವಿಷಯವಾಗಿದೆ.

ಪ್ರಥಮ ಮಹಿಳಾ ಇಂಜಿನಿಯರ್
ರಂಗನಾಯಕಮ್ಮ ಮೈಸೂರು ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಎಂಜಿನಿಯರ್. ಒಂದು ಕಾಲಕ್ಕೆ ಮಹಿಳೆಯರಿಗೆ ಎಂಜಿನಿಯರಿಂಗ್ ರಂಗಕ್ಕೆ ಪ್ರವೇಶವಿರಲಿಲ್ಲ. 1940ರವರೆಗೆ ಎಂಜಿನಿಯರಿಂಗ್ ರಂಗ ಮಹಿಳೆಗೆ ಮುಚ್ಚಿತ್ತು. ಈ ಮುಚ್ಚಿದ ಬಾಗಿಲನ್ನು ಹೋರಾಡಿ ತೆರೆಸಿದ ಕೀರ್ತಿ ಎ. ಲಲಿತಾ ಮತ್ತು ಆಕೆಯ ತಂದೆ ಪ್ರೊ. ಪಪ್ಪು ಸುಬ್ಬರಾವ್ ಅವರಿಗೆ ಸೇರುತ್ತದೆ. ಹದಿನೆಂಟನೇ ವಯಸ್ಸಿಗೆ ಒಂದು ಮಗುವಿನ ತಾಯಿಯಾಗಿ ವಿಧವೆಯಾದ ಲಲಿತಾ ಮದ್ರಾಸಿನ ಗಿಂಡಿ ಎಂಜಿನಿಯರಿಂಗ್ ಸೇರಿ ಎಂಜಿನಿಯರಿಂಗ್ ಪದವಿ ಪಡೆದರು.

ರಂಗನಾಯಕಮ್ಮವರಿಗೆ, ಲಲಿತಾ ಅವರಂತೆ ಎಂಜಿನಿಯರಿಂಗ್ ಪ್ರವೇಶಕ್ಕೆ ಹೋರಾಡಬೇಕಿಲ್ಲದಿದ್ದರೂ, ಸಂದರ್ಶನದ ಸಮಯದಲ್ಲಿ ಕಾಲೇಜಿನ ಆಡಳಿತವರ್ಗ, ’ನಾವೇನಾದರೂ ನಿಮಗೆ ಅವಕಾಶ ಕೊಡದಿದ್ದರೆ ನೀವು ಕೋರ್ಟಿಗೆ ಹೋಗುತ್ತೀರಾ?’ ಎಂದು ಕೇಳಿದ್ದರು. ‘ಹೋಗಬಹುದು ಸರ್’ ಎಂದು ರಂಗನಾಯಕಮ್ಮ ದಿಟ್ಟವಾಗಿ ಉತ್ತರಿಸಿದ್ದರು. ಅರ್ಧ ಶತಮಾನದ ಹಿಂದೆ ಹೆಣ್ಣುಮಗಳೊಬ್ಬಳು ತನಗೆ ಇಷ್ಟವಾದ ರಂಗದಲ್ಲಿ ಪ್ರವೇಶ ಪಡೆದು, ತನ್ನ ಉದ್ದೇಶದ ಹಾದಿಯಲ್ಲಿ ಹಾದ ಅಡೆತಡೆಗಳನ್ನೆಲ್ಲ ದಾಟಿ, ಸಾಧನೆಯ ತುತ್ತ ತುದಿಯೇರಿದ್ದು ಅಪೂರ್ವ ಎನಿಸುತ್ತದೆ.

ಬಡತನದ ಬದುಕು
ಸಂಸ್ಕೃತ ಪ್ರಾಧ್ಯಾಪಕರ ನಾಲ್ಕನೇ ಹೆಣ್ಣು ಮಗಳಾಗಿ ಜನಿಸಿದ ರಂಗನಾಯಕಮ್ಮ ವರ್ಷ ತುಂಬುವುದರೊಳಗೆ ತಾಯಿಯನ್ನು ಕಳೆದುಕೊಂಡಿದ್ದರು. ಹತ್ತನೇ ತರಗತಿಯಲ್ಲಿದ್ದಾಗಲೆ ತಂದೆ ತೀರಿಕೊಂಡಿದ್ದರು.

ತಂದೆ ತಾಯಿ ಇಲ್ಲದ ನಾಲ್ಕು ಹೆಣ್ಣುಮಕ್ಕಳಿಗೆ ಇಡೀ ಸಮುದಾಯ ನೆರವಾದ ಪರಿ ಅದ್ಭುತವೆನಿಸುತ್ತದೆ. ಬಡಾವಣೆಯ ನಾಲ್ಕು ಜನ ಸಹೃದಯರು ಒಂಟಿಕೊಪ್ಪಲ್‌ನಲ್ಲಿ ಚಿಕ್ಕಮನೆ ಹುಡುಕಿ ಮಕ್ಕಳಿಗೆ ಕೊಡಿಸಿದ್ದು. ಊಟದ ಖರ್ಚನ್ನು ರಾಜಾ ಎಣ್ಣೆಮಂಡಿಯ ತಿರುವೇಂಗಡಶೆಟ್ಟರು ವಹಿಸಿಕೊಂಡದ್ದು. ಪ್ರತಿ ತಿಂಗಳೂ ತಪ್ಪದೇ ದಿನಸಿಯಿಂದ ಹಿಡಿದು ಬೆಂಕಿಪೊಟ್ಟಣ ಕೂಡಾ ಮರೆಯದೆ ಕಳುಹಿಸಿದ್ದು. ಪಿ.ಯು.ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ರಂಗನಾಯಕಮ್ಮನಿಗೆ, ಎಂಜಿನಿಯರಿಂಗ್‌ಗೆ ಅರ್ಜಿ ಹಾಕಲು ಹಣ ಕೊಟ್ಟ ಪ್ರೊ. ಕೇಶವ ಐಯ್ಯಂಗಾರ್ಯರು. ಸಂದರ್ಶನಕ್ಕೆ ಕರೆ ಬಂದರೆ ಬಸ್ಸಿನ ವ್ಯವಸ್ಥೆ ಇಲ್ಲದ ಆ ಕಾಲದಲ್ಲಿ, ದುಬಾರಿ ಜಟಕಾ ಹಿಡಿಯಲು ಹಣವಿಲ್ಲದೆ ಮನೆಯಲ್ಲಿ ಕುಳಿತವಳಿಗೆ ಗಾಡಿ ಖರ್ಚು ಕೊಟ್ಟು ಕಳುಹಿಸುವ ಗೆಳತಿ ರಾಜಾಮಣಿ. ಬಲು ದೂರದ ಕಾಲೇಜಿಗೆ ಹೋಗಲು ಕುಟುಂಬದ ಹಿತೈಷಿಗಳಾದ ಹಿರಿಯ ವೈದ್ಯ ಅಶ್ವತ್ಥನಾರಾಯಣರಾವ್ ಅವರು ಒಂದು ಲೇಡಿಸ್ ಸೈಕಲ್ ಕೊಡಿಸಿದ್ದು. ರಂಗನಾಯಕಮ್ಮನ ಈ ಕತೆಯಲ್ಲಿ, ತಂದೆ ತಾಯಿಯನ್ನು ಕಳೆದುಕೊಂಡ ನಾಲ್ವರು ಹೆಣ್ಣುಮಕ್ಕಳ ದಿಟ್ಟತನದ ಬದುಕೂ ಇದೆ. ಹಾಗೆಯೇ ಈ ಹೆಣ್ಣು ಮಕ್ಕಳಿಗೆ ಬಡಾವಣೆಯ ಸಹೃದಯರು, ಇಡೀ ಮೈಸೂರಿನ ಸಮಾಜ ಬೆಂಬಲಕ್ಕೆ ನಿಂತ ಅದ್ಭುತ ಚಿತ್ರವೂ ಇದೆ. ಸ್ವಸ್ಥ ಸಮುದಾಯದ ಬದುಕು, ಹಂಚಿಕೊಳ್ಳುವ ಅಂತಃಕರಣ, ನೆರವಾಗುವ ಪರಿ ಕಳೆದು ಹೋಗುತ್ತಿರುವ ಜೀವನ ಮೌಲ್ಯಗಳ ಇಣುಕು ನೋಟ ಮಯೂರಾ ಅವರ ಈ ಕಿರು ಹೊತ್ತಿಗೆಯಲ್ಲಿ ಕಾಣಸಿಗುತ್ತದೆ.

ಏರೋನಾಟಿಕಲ್ ರಂಗಕ್ಕೆ ಪ್ರವೇಶ
ರಂಗನಾಯಕಮ್ಮ 1968ರಲ್ಲಿ ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದಿಂದ ಎಂ.ಎಸ್. ಪದವಿ ಪಡೆದರು. ಅಲ್ಲಿಯೇ ಅವರ ಭೇಟಿ ಡಾ. ಪ್ರಸಾದ್ ಅವರೊಡನಾಗಿತ್ತು. ಭಾರತಕ್ಕೆ ಹಿಂದಿರುಗಿ ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎ.ಡಿ.ಇ.) ಸೇರಿದರು. ಇಲ್ಲಿ ಇವರೊಬ್ಬರೇ ಮಹಿಳೆ! ಕೊಂಚ ಮೊದಲೇ ಭಾರತಕ್ಕೆ ಹಿಂತಿರುಗಿದ್ದ ಡಾ. ಪ್ರಸಾದ್ ಅವರನ್ನು ವಿವಾಹವಾದರು. ಸೊಸೆ ಹೊರಗೆ ದುಡಿಯುವುದು ಬೇಡ ಎಂಬ ಅಭಿಪ್ರಾಯವಿದ್ದ ಅತ್ತೆ ಮಾವಂದಿರನ್ನು ಒಪ್ಪಿಸಿ ಎ.ಡಿ.ಇ.ಗೆ ರಂಗನಾಯಕಮ್ಮ ಸೇರಿದ್ದರು. ರಕ್ಷಣಾ ದಳದ ಸಂಶೋಧನಾ ಇಲಾಖೆಯಾದ ಎ.ಡಿ.ಇ.ನಲ್ಲಿ ಹಗುರ ವಿಮಾನಗಳ, ಯುದ್ಧ ವಿಮಾನಗಳ ಸಂಶೋಧನೆ ನಡೆಯುತ್ತಿತ್ತು. ಇಲ್ಲಿ ರಂಗನಾಯಕಮ್ಮ ಹಾರಾಡುವ ಯಂತ್ರಗಳು ಎದುರಿಸಬೇಕಾಗುವ ಅನೇಕ ರೀತಿಯ ಒತ್ತಡಗಳು, ಯಂತ್ರಭಾಗಗಳ ಮೇಲೆ ಅವುಗಳಿಂದ ಉಂಟಾಗಬಹುದಾದ ಪರಿಣಾಮ ಮತ್ತು ಅವುಗಳ ನಿವಾರಣೋಪಾಯಗಳನ್ನು ಕುರಿತು ಅಧ್ಯಯನ ಮಾಡಲು ಒಂದು ಪ್ರಯೋಗಶಾಲೆಯನ್ನು ಸ್ಥಾಪಿಸಿದರು. ಎ.ಡಿ.ಇ.ಯಲ್ಲಿ ರಂಗನಾಯಕಮ್ಮ 20 ವರ್ಷಗಳ ಕಾಲ ದುಡಿದರು. ಇಲ್ಲಿ ಹಾರಾಡುವ ವಿಮಾನಗಳ ಮೇಲೆ ಅವುಗಳ ವಿವಿಧ ಭಾಗಗಳ ಮೇಲೆ ಒತ್ತಡಗಳಿಂದಾಗುವ ಪರಿಣಾಮಗಳನ್ನು ವಿಶ್ಲೇಷಿಸಿದರು. ಚಾಲಕರಹಿತ ವಿಮಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

1986ರಲ್ಲಿ ಪತಿ ಮೇರಿಲ್ಯಾಂಡ್‌ನಲ್ಲಿನ ನಾಸಾ ಕೇಂದ್ರಕ್ಕೆ ಬಂದರು. 1991ರಲ್ಲಿ ರಂಗನಾಯಕಮ್ಮ ತಮ್ಮ ಎ.ಡಿ.ಇ. ಕೆಲಸಕ್ಕೆ ರಾಜಿನಾಮೆ ನೀಡಿ, ಮಗಳು ಬೃಂದಾಳೊಡನೆ ಅಮೆರಿಕೆಗೆ ಬಂದಿಳಿದರು. ಡಾ. ಲೀ ಅವರ ಸಂಸ್ಥೆಗೆ ಸೇರಿ, ಲಿಡಾರ್ ಉಪಕರಣಗಳನ್ನು ಕುರಿತು ವಿಶೇಷ ತಯಾರಿಕೆಯಲ್ಲಿ ತೊಡಗಿದ್ದಾರೆ. ಲಿಡಾರ್ ರಡಾರ್‌ನಂತೆ ಕೆಲಸ ಮಾಡುವ ಉಪಕರಣ. ಆದರೆ ಇದು ಲೇಸರ್ ಬಳಸುವ ಉಪಕರಣ. ರಂಗನಾಯಕಮ್ಮ ವಾಯುಮಂಡಲದ ಅಧ್ಯಯನಕ್ಕಾಗಿ ಬಳಸುವ ‘ಮೈಕ್ರೋ ಪಲ್ಸ್ ಲಿಡಾರ್’ ಉಪಕರಣದ ರೂವಾರಿ ಎಂದು ಇಂದು ಗುರುತಿಸಲ್ಪಡುತ್ತಾರೆ. ಇವರ ಸಂಸ್ಥೆ ತಯಾರಿಸಿದ ಲಿಡಾರ್‌ಗಳು ಪ್ರಪಂಚದ ಎಲ್ಲೆಡೆಯಲ್ಲಿಯೂ ಮಾರಾಟವಾಗಿವೆ.

ಮಹಿಳಾ ಪರಂಪರೆಯ ಅಪೂರ್ವ ಕೊಂಡಿ
ಮಹಿಳಾ ಪರಂಪರೆಯ ಒಂದೊಂದು ಕತೆಯೂ ಅಮೂಲ್ಯ ಎಂದು ನಾನು ಭಾವಿಸುತ್ತೇನೆ. ಮಯೂರ ಅವರು ರಂಗನಾಯಕಮ್ಮನ ಇಷ್ಟೆಲ್ಲ ವಿವರಗಳನ್ನು ಸಂಗ್ರಹಿಸಿ, ಸರಳವಾಗಿ ಅವನ್ನು ಕತೆ ಹೆಣೆದು ಕೊಟ್ಟು, ಮಹಿಳಾ ಚರಿತ್ರೆಯ ಒಂದು ಕೊಂಡಿಯನ್ನು ಕೂಡಿಸಿದ್ದಾರೆ. ಮೇಧಾವಿ ಪತ್ನಿಗೆ ಬೆಂಬಲ, ಸಾಂಗತ್ಯ ನೀಡಿದ ಪತಿ ಪ್ರಸಾದರ ನುಡಿಚಿತ್ರವೂ ಇಲ್ಲಿ ದಾಖಲಾಗಿದೆ.

ಇಂದು ನಾನು ಎಂಜಿನಿಯರಿಂಗ್ ಕಾಲೇಜುಗಳಿಗೆ ಅನೇಕ ಬಾರಿ ಹೋಗುತ್ತಿರುತ್ತೇನೆ, ಅಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೇರಳವಾಗಿರುವುದನ್ನು ಕಂಡಾಗ ರೋಮಾಂಚನವಾಗುತ್ತದೆ. ಇಂದಿನ ಈ ಹೆಣ್ಣುಮಕ್ಕಳ ಆತ್ಮವಿಶ್ವಾಸ ಮತ್ತು ಯಶಸ್ಸಿನ ಹಿಂದೆ ರಂಗನಾಯಕಮ್ಮನಂತಹ ಮೊದಲಗಿತ್ತಿಯರ ಶ್ರಮ, ದಿಟ್ಟತನ ಇದೆ ಎಂಬುದನ್ನು ನಾವು ಮರೆಯುವಂತಿಲ್ಲ.

(ಪ್ರೊ ಬಿ ಎಸ್ ಮಯೂರ ಅವರು ಬರೆದಿರುವ ರಂಗನಾಯಕಮ್ಮ ಕುರಿತ ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದ್ದು ಬೆಂಗಳೂರಿನಲ್ಲಿ ನಾಳೆ ಬಿಡುಗಡೆ ಆಗಲಿದೆ. )

Ranganayakamma - The First Lady Aeronautical Engineer of Karnataka
Article by Nemichandra in Prajavani Bhoomika 20 Nov 2010

Friday, November 19, 2010

Navakarnataka Book Launch Ceremony on 21 November 2010 at KaSaPa Bangalore




ಪ್ರಜಾವಾಣಿ » ಮೆಟ್ರೊ ಶನಿವಾರ



ನವ ಕರ್ನಾಟಕದ ‘ವನಿತಾ ಚಿಂತನ’



ನವಕರ್ನಾಟಕ ಪ್ರಕಾಶನ: ಭಾನುವಾರ ವನಿತಾ ಚಿಂತನ ಮಾಲೆಯಡಿ ಆರು ಕೃತಿಗಳ ಲೋಕಾರ್ಪಣೆ.

ಲೇಖಕಿ ಜಿ.ಟಿ. ಕುಸುಮಾ ಅವರ ‘ಫ್ಲಾರೆನ್ಸ್ ನೈಟಿಂಗೇಲ್‌ಳ ಬದುಕು ಸಾಧನೆ’; ಪ್ರೊ. ಬಿ.ಎಸ್.ಮಯೂರ ಅವರ ‘ಬಿ. ರಂಗನಾಯಕಮ್ಮ’ (ಮೈಸೂರು ವಿವಿಯಿಂದ ಬಿಇ ಪದವಿ ಪಡೆದ ಮೊದಲ ಮಹಿಳೆಯ ಬದುಕು- ಸಾಧನೆ); ಗೀತಾ ಅವರ ‘ಅಮ್ಮನಿಗೆ ಹಜ್ ಬಯಕೆ’ (ಇಂಡೋನೇಶಿಯಾದ ದಿಟ್ಟ ಮಹಿಳೆಯರ ಸಹಜ ಕಥೆಗಳು: ಮೂಲ ಅಸ್ಮಾ ನಾಡಿಯಾ). ಫಕೀರ ಮುಹಮ್ಮದ್ ಕಟ್ಟಾಡಿ ಅವರ ‘ಸೂಫಿ ಮಹಿಳೆಯರು’ (ಸೂಫಿ ಪಂಥದ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ ಹೋರಾಟದ ಕುರಿತ ಕೃತಿ), ನೇಮಿಚಂದ್ರ ಅವರ ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು’ (ಹದಿನೇಳನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿದ್ದ ಆಫ್ರಾ ಬೆನ್ನ, ಭಾರತದವರೇ ಆದ ಭಾಂವ್ರಿ ದೇವಿ, ರೂಪನ್ ಬಜಾಜ್ ಮತ್ತು ಮ್ಯಾನ್ಮಾರ್‌ನ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಮತ್ತಿತರರ ಹೋರಾಟದ ಚಿತ್ರಣ) ಮತ್ತು ‘ಮಹಿಳಾ ವಿಜ್ಞಾನಿಗಳು’ ಲೋಕಾರ್ಪಣೆ.
ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ಬೆಳಿಗ್ಗೆ 10.