Tuesday, March 20, 2012

ನವಕರ್ನಾಟಕ ಪ್ರಕಾಶನದ ಮುಂಬರುವ ಕೃತಿಗಳು 

     ಶ್ರೀ ಬಿ. ಎ. ಸನದಿಯವರ ವ್ಯಕ್ತಿತ್ವ ಮತ್ತು ಅವರ ಕಾವ್ಯದ ಬಗ್ಗೆ ಒಂದು ಸಂಪೂರ್ಣ ನೋಟವನ್ನಿಲ್ಲಿ ಗೌರೀಶ ಕಾಯ್ಕಿಣಿಯವರು ನೀಡಿದ್ದಾರೆ. ಸನದಿ-ಕಾಯ್ಕಿಣಿ ಇಬ್ಬರೂ ಕವಿಗಳೇ-ಸಾಹಿತಿಗಳೇ ಆದ್ದರಿಂದ ಇಲ್ಲಿನ ವಿಮರ್ಶೆ, ವ್ಯಕ್ತಿಚಿತ್ರಣಕ್ಕೆ ಒಳ್ಳೆಯ ಮೌಲ್ಯ ಬಂದಿದೆ. ವಿಮರ್ಶಕರೂ, ವಿಚಾರವಾದಿಗಳೂ, ಸಾಹಿತಿಯೂ ಆಗಿರುವ ಗೌರೀಶ ಕಾಯ್ಕಿಣಿಯವರು ತಮ್ಮ ಸಮಕಾಲೀನ ಕವಿಯೊಬ್ಬರ ಕಾವ್ಯಕ್ಕೆ ಅಲ್ಲಿನ ಮೌಲ್ಯಕ್ಕೆ ಈ ಮೂರು ನೆಲೆಗಳಲ್ಲಿ ನ್ಯಾಯವೊದಗಿಸಿದ್ದಾರೆ. ಕಾವ್ಯದ ತುಣುಕುಗಳನ್ನು ಅಲ್ಲಲ್ಲಿ ಉದಾಹರಿಸುತ್ತ ಅಲ್ಲಡಗಿರುವ ವೈವಿಧ್ಯಮಯ ಜಾಡನ್ನು ಉಲ್ಲೇಖಿಸುತ್ತ ಓದುಗನಿಗೆ ನಿಲುಕದಿರುವ ಸಂಗತಿಗಳನ್ನು ತಿಳಿಸಿಕೊಟ್ಟಿದ್ದಾರೆ. ತೂಕದ ವಿಮರ್ಶೆ ಮತ್ತು ಮೌಲ್ಯಮಾಪನವನ್ನಿಲ್ಲಿ ಓದುಗರು ಗ್ರಹಿಸಬಹುದು. ನವ ಸಂಭವದ ನಿರೀಕ್ಷೆ, ಭವಿಷ್ಯದಲ್ಲಿ ಒಳ್ಳೆಯ ವಿಚಾರಗಳಿರಲಿ ಎಂಬ ಆಕಾಂಕ್ಷೆ ಸನದಿಯವರ ಹೆಚ್ಚಿನ ಕವಿತೆಗಳಲ್ಲಿವೆ.









     ನಾಡಿನ ಹಿರಿಯ ಕವಿಗಳು ಬರೆದ ಬೇರೆ ಬೇರೆ ಕಾವ್ಯಗಳನ್ನು ಬಿ. ಎ. ಸನದಿಯವರು ತಮ್ಮ ದೃಷ್ಟಿಕೋನದಿಂದ ವಿಮರ್ಶೆ ಮಾಡಿರುವ ಅಪೂರ್ವ ಕೃತಿ. ಜನರ ಮಧ್ಯೆ ಬೆಳೆದು ಬಂದ ಕಾವ್ಯವು ಜನಮನದಲ್ಲಿ ಸ್ಥಿರವಾಗಿ ನಿಲ್ಲುತ್ತದೆ. ಕಾಲಕಾಲಕ್ಕೆ ಹೊಸ ಹೊಸ ಚಿಗುರು-ಹೂವು-ಹಣ್ಣುಗಳನ್ನು ಬಿಡುವ ಒಂದು ಮರದಂತೆ ಕಾವ್ಯವನ್ನು ಸೃಷ್ಟಿಸಬೇಕು. ಹೊಸ ಅಲೆಗಳನ್ನು ಸ್ವೀಕರಿಸುತ್ತ ಹಳೆಯ ಮೌಲ್ಯಗಳನ್ನು ಉಳಿಸಿಕೊಳ್ಳುತ್ತ ಜನರ ಒಡನಾಡಿಯಾಗಿ ಕಾವ್ಯ ನಿಲ್ಲಬೇಕು, ಜನರ ಮಧ್ಯೆಯೇ ಉಸಿರಾಡಬೇಕು. ಕಾವ್ಯ ಸೃಷ್ಟಿಯ ಉದ್ದೇಶವೂ ಇದೇ ಆಗಿದೆ. ನವ್ಯ ಕಾವ್ಯ, ನವ್ಯೋತ್ತರ ಕಾಲಗಳಲ್ಲಿನ ಈ ವಿಮರ್ಶೆ ಮುಂದೊಂದು ದಿನದ ಕಾವ್ಯ ಸೃಷ್ಟಿಗೂ ಅನ್ವಯಿಸುವಂತಿದೆ. ಒಳನಾಡಿನಲ್ಲೂ ಹೊರ ನಾಡಿನಲ್ಲೂ ವಿವಿಧ ಜನರ ಮಧ್ಯೆ ಬೆರೆತು ಜನಜೀವನದ ನಾಡಿಮಿಡಿತಗಳನ್ನು ಚೆನ್ನಾಗಿ ಅರಿತಿರುವ ಸನದಿಯವರ ಇಲ್ಲಿನ ವಿಮರ್ಶೆ ಜನಕಾವ್ಯದೃಷ್ಟಿಗೆ ಹಿಡಿದ ಕನ್ನಡಿಯಂತಿದೆ.

No comments:

Post a Comment