Saturday, May 12, 2012

ನವಕರ್ನಾಟಕ ಪ್ರಕಾಶನದ  ಕೃತಿಗಳು

ಹಳ್ಲಿಗಳನ್ನು ಅಭಿವೃದ್ಧಿಪಡಿಸಿ ಅಲ್ಲಿನ ಶಿಕ್ಷಣದ ಬಗ್ಗೆ ಸಮಗ್ರ ಬದಲಾವಣೆ ತರಬೇಕಾದ ಅಗತ್ಯವನ್ನು ವಿಶೇಷವಾಗಿ ಪ್ರಸ್ತಾಪಿಸಿ ಬರೆದ ಲೇಖನಗಳಿವು. ಇದರಲ್ಲಿ ನಮ್ಮ ಹಳ್ಳಿಗಳು ಅಭಿವೃದ್ಧಿಯಾಗದಿರಲು ಕಾರಣವೇನೆಂಬುದನ್ನೂ ನೇರವಾಗಿಯೇ ಗುರುತಿಸಿದೆ. ಸಮಾಜಸೇವಾಸಕ್ತರಾದ ಶ್ರೀ ಜಿ. ಎಸ್. ಜಯದೇವ ಬರೆದ ಈ ಬರಹಗಳಲ್ಲಿ ಸಾಮಾಜಿಕ ಕಳಕಳಿ ಎದ್ದುಕಾಣುತ್ತಿದೆ. ಅಂಕಣ ಬರಹಗಳಾದ ಈ ಲೇಖನಗಳಲ್ಲಿ ಒಂದು ಹೆಚ್ಚು ಒಂದು ಕಮ್ಮಿ ಎನ್ನುವಂತಿಲ್ಲ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಪ್ರಗತಿಯ ಹೆಸರಿನಲ್ಲಿ ಶಿಕ್ಷಣ, ನೀರಾವರಿ, ಗುಡಿ-ಕೈಗಾರಿಕೆ ಮುಂತಾದುವನ್ನು ಕಡೆಗಣಿಸಿ ಶ್ರೀಸಾಮಾನ್ಯನ ದಿಕ್ಕೆಡಿಸಿದ ಇಂದಿನ ಸಾಮಾಜಿಕ ಸ್ಥಿತಿಗತಿಗಳ ಅವಲೋಕನ.



ಅತ್ಯಂತ ಪ್ರಭಾವಶಾಲಿ ಲೇಖಕರೆಂದು ಹೆಸರು ಗಳಿಸಿದ ರಹಮತ್ ತರೀಕೆರೆ ಅವರ ಪ್ರವಾಸಾನುಭವಗಳ ಲೇಖನಮಾಲೆ. ಇಲ್ಲಿನ ಎಲ್ಲ ಬರಹಗಳೂ ಓದುಗರ ಮನಸೂರೆಗೊಳ್ಳುವುದಂತೂ ಸತ್ಯ. ನಾಡನ್ನು ಸುತ್ತಿ ವಿವಿಧ ಮಾಹಿತಿಗಳನ್ನು ಕಲೆಹಾಕಿ ತಮ್ಮ ಅನುಭವ ಹೆಚ್ಚಿಸಿಕೊಳ್ಳುವುದೇ ಅಲ್ಲದೆ ಅವನ್ನು ಪುಸ್ತಕ, ಲೇಖನಗಳ ಮೂಲಕ ಆಪ್ತವಾಗಿ ಹಂಚಿಕೊಳ್ಳುವುದು ಇವರ ಒಂದು ವಿಶೇಷ ಗುಣ. ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿನ ತಿರುಗಾಟದ ಒಟ್ಟು ೩೮ ಬರಹಗಳಿವೆ. ಇವರ ಪ್ರವಾಸಕಥನಗಳು ಆಯಾ ಪ್ರದೇಶದ ಐತಿಹಾಸಿಕ ಮಹತ್ವವನ್ನು ತಿಳಿಸುವುದಲ್ಲದೆ ಅಲ್ಲಿಯ ಅಂದಿನ-ಇಂದಿನ ಬದುಕಿನ ರೀತಿಯನ್ನೂ ತಿಳಿಸುತ್ತವೆ. ಓದಿ ಮರೆಯುವ ಯಾವ ವಿಷಯವೂ ಇಲ್ಲಿಲ್ಲ.




 ಸಾಮಾಜಿಕ ಕಾದಂಬರಿ. ನಮ್ಮಲ್ಲಿ ಅನೇಕ ಆತಂಕಗಳನ್ನು ಸೃಷ್ಟಿಸಬಲ್ಲಂತಹ ಅಂತರ್ಮತೀಯ ವಿವಾಹದ ಒಳಿತು-ಕೆಡುಕುಗಳನ್ನು ವಿಶ್ಲೇಷಿಸುತ್ತದೆ. ಪರಸ್ಪರ ಪ್ರೀತಿಸಿ ತಮ್ಮಿಚ್ಛೆಯಂತೆ ಬಾಳಲು ಬಿಡಲೊಲ್ಲದ ಸಮಾಜದ ನಡವಳಿಕೆಗಳ ಚಿತ್ರಣ. ಹೆಜ್ಜೆ ಹೆಜ್ಜೆಗೂ ಎದುರಿಸಬೇಕಾದ ಸಂಘರ್ಷಗಳ ಸರಮಾಲೆ ಹೇಗಿದ್ದುವೆಂಬ ಅರಿವು ನೀಡುವ ಕಥನ. ಕೌಟುಂಬಿಕ ಪರಿಸರವನ್ನು ದಾಟಿ ಮುಂದುವರೆದು ಕೇವಲ ವ್ಯಕ್ತಿಗತವಾದ ವಿಷಯವೊಂದು ಹೇಗೆ ಅನಗತ್ಯ ಪ್ರಚಾರದಿಂದ ಅಸಹನೀಯವಾಗುತ್ತದೆಂದು ನಾವು ಇಲ್ಲಿ ಗ್ರಹಿಸಬಹುದು. ಕಾಲೇಜು ದಿನಗಳಲ್ಲಿನ ಪ್ರೀತಿ-ಪ್ರೇಮ-ಪ್ರಣಯಗಳು ಬಾಳಿನಲ್ಲಿ ಹೇಗೆ ಗುಲ್ಲೆಬ್ಬಿಸುತ್ತವೆಂದು ತಿಳಿಸುವ ಒಂದು ನೈಜ ಅಪೂರ್ವ ಕಥೆ.

No comments:

Post a Comment