Saturday, November 30, 2013

ಜೀವಂತ ಭಾಷೆಯಲ್ಲಿ ಜನಪ್ರಿಯ ವಿಜ್ಞಾನ

ಗುಜರಿ ಅಂಗಡಿ

Saturday, November 30, 2013

http://gujariangadi.blogspot.in/2013/11/blog-post_30.html

ಜೀವಂತ ಭಾಷೆಯಲ್ಲಿ ಜನಪ್ರಿಯ ವಿಜ್ಞಾನ

ಸಾಹಿತ್ಯೇತರವಾದ ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಇತ್ಯಾದಿಗಳ ಸಮ್ಮಿಳಿತ ಬರಹಗಳ ಸಂಗ್ರಹ ‘ಮನಸ್ಸುಗಳ ನಡುವೆ ಪುಷ್ಪಕ ವಿಮಾನ’. ವಿಜ್ಞಾನವನ್ನು ಅತ್ಯಂತ ಸರಳವಾಗಿ, ಕುತೂಹಲಕರವಾಗಿ ತೆರೆದಿಟ್ಟಿದ್ದಾರೆ ಲೇಖಕ ರೋಹಿತ್ ಚಕ್ರತೀರ್ಥ. ಜನಪ್ರಿಯ ವಿಜ್ಞಾನಗಳನ್ನು ಜನರ ಬಳಿಗೆ ತಲುಪಿಸುವ ಒಂದು ಅತ್ಯುತ್ತಮ ಪ್ರಯತ್ನವಿದು. ಕನ್ನಡದಲ್ಲಿ ಇಂತಹ ಬರಹಗಳು ತೀರಾ ಅಪರೂಪವಾಗುತ್ತಿವೆ. ಇಂತಹ ವಸ್ತುಗಳು ಒಣಗಿದ ವಿಜ್ಞಾನ ಭಾಷೆಯಲ್ಲಿ ಪ್ರಕಟವಾಗುವುದೇ ಜಾಸ್ತಿ. ಹೀಗಿರುವಾಗ, ರೋಹಿತ್, ತಮ್ಮ ಸರಳ ಜೀವಂತ ಭಾಷೆಯಲ್ಲಿ ವಿಜ್ಞಾನವನ್ನು ಕುತೂಹಲಕರವಾಗಿ ನಿರೂಪಿಸಿದ್ದಾರೆ. 

ವಿಷಯವೈವಿಧ್ಯಗಳೇ ಇಲ್ಲಿವೆ. ಕನ್ನಡದಲ್ಲಿ ವಿಜ್ಞಾನ ಪತ್ರಿಕೆಗಳ ಕುರಿತಂತೆ ಆರಂಭಗೊಳ್ಳುವ ಕೃತಿ, ರೋಬೋಟಿಗೆ ಕಾಮನ್ ಸೆನ್ಸ್ ಬರುವುದು ಯಾವಾಗ ಎನ್ನುವವರೆಗೆ ೆ ವಿಜ್ಞಾನ, ತಂತ್ರಜ್ಞಾನ, ಆರೋಗ್ಯಗಳಿಗೆ ಸಂಬಂಧ ಪಟ್ಟ ವಿಷಯಗಳನ್ನು ಸರಳವಾಗಿ ಮುಂದಿಟ್ಟಿದ್ದಾರೆ. ‘ಸೌರಶಕ್ತಿಗೆ ನಮೋ ಎನ್ನಿ’ ಕೃತಿಯಲ್ಲಿ ವಿದ್ಯುತ್‌ಗೆ ಹೇಗೆ ಪರ್ಯಾಯವಾಗಿ ಸೌರಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಬಹುದು ಮತ್ತು ಅದರ ಲಾಭಗಳ ಕುರಿತಂತೆ ಬರೆಯುತ್ತಾರೆ. ಪೂರ್ಣ ಚಂದಿರ ರಜೆ ಹಾಕಿದರೆ ಹೇಗಿರುತ್ತದೆ? ಎನ್ನುವ ಲೇಖನ, ಚಂದ್ರನ ಬೆಳಕಿನ ಮಹತ್ವವನ್ನು ತೆರೆದಿಡುತ್ತದೆ. ಚಂದ್ರ ರಹಿತ ರಾತ್ರಿಗಳ ಪರಿಣಾಮಗಳ ಕುರಿತಂತೆ ವಿವರಿಸುವ ಲೇಖನ ಇದು. ಗುರುವಿನ ಗುಲಾಮಳ ಕತೆಯನ್ನು ಹೇಳುವ ರೋಹಿತ್, ಗುರುಗ್ರಹದ ಸುತ್ತಮುತ್ತಲಿನ ಪರಿಸರವನ್ನು ತೆರೆದಿಡುತ್ತಾರೆ. ವಿಜ್ಞಾನ, ತಂತ್ರಜ್ಞಾನಗಳನ್ನು ವ್ಯಂಗ್ಯ, ತಮಾಷೆ ಹಾಗೂ ಹೃದ್ಯವಾಗಿ ಹೇಳುವ ಕಲೆ ರೋಹಿತ್‌ಗೆ ಸಿದ್ದಿಸಿದೆ. ಇದು ಕೃತಿಯ ಹೆಗ್ಗಳಿಕೆಯೂ ಹೌದು. ತೀರಾ ಭಾರವಾಗುವಂತಹ ಯಾವ ಲೇಖನಗಳೂ ಇಲ್ಲಿಲ್ಲ. ಪುಟ್ಟ ಪುಟ್ಟ ಲೇಖನಗಳು ದೊಡ್ಡ ದೊಡ್ಡ ಚೋದ್ಯಗಳನ್ನು ನಿಮ್ಮ ಮುಂದೆ ಬಿಡಿಸಿಡುತ್ತದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 65 ರೂಪಾಯಿ.

No comments:

Post a Comment