Thursday, March 21, 2019

ಯಾವ ಜನ್ಮದ ಮೈತ್ರಿ ? (ರಾವೀಯಿಂದ ಕಾವೇರಿಯವರೆಗಿನ ಯಾನ)

‘ಒಳಗಿನವರು’ ಮತ್ತು ‘ಹೊರಗಿನವರು’ ಎಂಬ ಅಸಹನೆಯ ಚರ್ಚೆ ಎಲ್ಲ ಸಂಸ್ಕøತಿಗಳಲ್ಲೂ, ಎಲ್ಲ ಕಾಲಕ್ಕೂ ನಡೆಯುತ್ತಲೇ ಬಂದಿದೆ. ಬಹಳಷ್ಟು ಸಂದರ್ಭಗಳಲ್ಲಿ ಈ ಚರ್ಚೆ ನಮ್ಮೆಲ್ಲ ನಡಾವಳಿಯ ಸುಪ್ತವಾಹಿನಿಯಾಗಿರುತ್ತದೆ. ಸಾಧಾರಣವಾಗಿ, ಸರ್ದಾರ್ ಚಿರಂಜೀವಿ ಸಿಂಫ್ ಅವರ ಬಗ್ಗೆ ನಾವು ಬೆರಗು, ಸಂತಸ, ಸಂಭ್ರಮ ವ್ಯಕ್ತಪಡಿಸುವುದು ಅವರು ದೂರದ ಪಂಜಾಬಿನಿಂದ ಬಂದು ನಮ್ಮ ಸೀಮೆಯ ಗುಣಕ್ಕೆ ಅದ್ಭುತವಾಗಿ ಹೊಂದಿಕೊಂಡರು ಎಂಬ ಕಾರಣಕ್ಕೆ. ಅವರು ನಮ್ಮ ಸಂಸ್ಕøತಿಯ ಸೂಕ್ಷ್ಮ ಅರಿತರು; ನಮ್ಮ ಕಲೆ, ಸಂಗೀತ, ಸಾಹಿತ್ಯ ಪೋಷಿಸಿದರು; ನಮ್ಮ ಭಾಷೆ ಮತ್ತು ಅದರ ನುಡಿಗಟ್ಟನ್ನು ನಮಗಿಂತಲೂ ಚೆನ್ನಾಗಿ ಬಳಸಿದರು; ನಮ್ಮ ಹಬ್ಬಗಳ ಬಗ್ಗೆ ಹಿಗ್ಗಿದರು; ನಮ್ಮ ಊಟ, ಉಪ್ಪಿನಕಾಯಿ ಸವಿದರು; ಕೊನೆಗೆ, ನಮ್ಮ ನದಿಯಲ್ಲಿ ತಮ್ಮ ತಂದೆ-ತಾಯಿಯ ಮೋಕ್ಷ ಹುಡುಕಿದರು ಎಂಬ ಕಾರಣಕ್ಕೆ. ಅಂದರೆ, ‘ಮಾದರಿಯ ಹೊರಗಿನವರಾದರು’ ಎಂಬುದಕ್ಕೆ. ಇದೆಲ್ಲವೂ ಸರಿಯೆ. ಇದೆಲ್ಲವೂ ಅವರ ಹೆಗ್ಗಳಿಕೆ. ಆದರೆ, ಅವರನ್ನು ಮೆಚ್ಚಿಕೊಳ್ಳಲು ಇದಷ್ಟೆ ಸುಲಭದ ತರ್ಕ ಸಾಲದು.
ಜಗತ್ತು ಕಂಡು, ಅದರ ಮೂಲೆ-ಮೂಲೆಗಳಲ್ಲಿ ಬದುಕಿ, ತಮ್ಮ ಲೋಕದೃಷ್ಟಿ ವಿಸ್ತರಿಸಿಕೊಂಡು, ಆಧುನಿಕತೆಯ ಒಳ-ಹೊರಗನ್ನು ಅರಿಯುತ್ತಲೇ ಸಂಪ್ರದಾಯಕ್ಕೆ ವಿಶಾಲತೆಯ ಚಾದರವನ್ನು ಹೊದಿಸಿದ ಸಿಂಫ್ ಸಾಹೇಬರು ನಮ್ಮಲ್ಲಿ ನಮ್ಮವರಾಗಿ ಬದುಕಿದ್ದು ಅವರ ದೊಡ್ಡತನ, ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ. ಆದರೆ, ನಾವು ಅವರಿಂದ ಕಲಿತದ್ದೇನು? ಅವರ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಂಡದ್ದು ಹೇಗೆ? ಅವರ ಘನತೆ, ಸೂಕ್ಷ್ಮತೆ ಮತ್ತು ಪ್ರಬುದ್ಧತೆಗೆ ನಾವು ಸ್ಪಂದಿಸಿದ್ದು ಹೇಗೆ? ಅವರ ಭಾಷೆ, ಅವರ ಧರ್ಮ, ಅವರ ಸಂಸ್ಕøತಿಯ ವಿಶೇಷಗಳಿಗೆ ನಾವು ತೆರೆದುಕೊಂಡದ್ದು ಹೇಗೆ? ಇವೆಲ್ಲವನ್ನು ನಾವು ಯೋಚಿಸಬೇಕಿದೆ. ಹೀಗೆ ಯೋಚಿಸುವುದರ ಮೂಲಕ ನಾವು ನಮ್ಮ ಸಂಕುಚಿತತೆ, ಸಣ್ಣತನ, ಅಹಂಕಾರ, ಅಸಹನೆ, ಅಂಧಾಭಿಮಾನವನ್ನು ಮೀರಬೇಕಿದೆ. ನಮಗೆ ಇರಬಹುದಾದ ನಮ್ಮ ಶ್ರೇಷ್ಠತೆಯ ವ್ಯಸನದ ಸೂಚನೆಗಳನ್ನು ಧಿಕ್ಕರಿಸಬೇಕಿದೆ. ಇಲ್ಲಿರುವ ಲೇಖನಗಳು ನಮಗೆ ಈ ದಿಕ್ಕಿನಲ್ಲಿ ಸಾಗುವುದಕ್ಕೆ ಅನುವು ಮಾಡಿಕೊಡಲಿವೆ.
ಈ ಲೇಖನಗಳನ್ನು ಬರೆಯುವ ಮುನ್ನ ಕೂಡ ಸಿಂಫ್ ಅವರು ಕನ್ನಡದಲ್ಲಿ ಬರೆಯುತ್ತಿದ್ದರು. ಆದರೆ, ಅದು ಸರ್ಕಾರಿ ವ್ಯವಹಾರಗಳಿಗೆ ಸೀಮಿತಗೊಂಡಿತ್ತು. ತಮ್ಮ ಮಾತೃಭಾಷೆಯಾದ ಪಂಜಾಬಿ, ಶಿಷ್ಟವಾಗಿ ಕಲಿತ ಜರ್ಮನ್, ಫ್ರೆಂಚ್, ಉರ್ದು, ಹಿಂದಿ, ಮರಾಠಿ, ಬೆಂಗಾಲಿ ಸೇರಿದಂತೆ ಇನ್ನೂ ಅನೇಕ ಭಾಷೆಗಳಲ್ಲಿ ಸಾಹಿತ್ಯಿಕ ನಿಪುಣತೆಯಿಂದ ವ್ಯವಜರಿಸಬಹುದಾದ ಸಿಂಫ್ ಅವರು, ತಾವು ಬಳ್ಳಾರಿ ಮತ್ತು ತರೀಕೆರೆಗಳಲ್ಲಿ ಕಲಿಯಲು ಪ್ರಾರಂಭಿಸಿದ ಕನ್ನಡಕ್ಕೆ ನಿರ್ದಿಷ್ಟ ಆಲೋಚನಾ ಸ್ವರೂಪ ಕೊಟ್ಟದ್ದು ಇದೇ ಮೊದಲು, ಈ ಲೇಖನಗಳ ಮೂಲಕ. ಇದು ನನ್ನ ‘ವಿಜಯ ಕರ್ನಾಟಕ’ದ ಸಂಪಾದಕತ್ವದ ಬೆಲೆ ಹೆಚ್ಚಿಸಿತು. ಅದಕ್ಕಾಗಿ ನಾನು ಅವರಿಗೆ ನಮಸ್ಕರಿಸುತ್ತೇನೆ.
- ಸುಗತ ಶ್ರೀನಿವಾಸರಾಜು
http://www.navakarnatakaonline.com/yaava-janmada-maitri

No comments:

Post a Comment