Monday, March 23, 2009

Book Review - Mateyaru Manyaragiddaga of Debiprasad Chattopadhyaya - Published in Suddigiduga Daily - 23-03-2009

23-03-2009

ಕೃಷಿ ಆವಿಷ್ಕರಿಸಿ ತುತ್ತಿನ ಚೀಲ ತುಂಬಿಸಿದ ಅನ್ನದಾತೆಯರು
ಕೃತಿ : ಮಾತೆಯರು ಮಾನ್ಯರಾಗಿದ್ದಾಗ
ಬಂಗಾಳಿ ಲೇಖಕರು : ದೇವಿಪ್ರಸಾದ್ ಚಟ್ಟೋಪಾಧ್ಯಾಯ
ಕನ್ನಡ ಅನುವಾದ : ಜಿ. ಕುಮಾರಪ್ಪ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಟಗಳು : 56 ಬೆಲೆ : ರೂ. 20-00

'ಮಾತೆಯರು ಅನ್ನಪೂರ್ಣೆಯರು' ಎಂದು ಬಾಯಿತುಂಬಾ ಹರಸಿದ್ದನ್ನು ಕೇಳಿದಾಗ 'ಬರೀ ಶಿಷ್ಟಾಚಾರದ ಮಾತು ಇದು' ಎಂದು ಉಪೇಕ್ಷೆ ಮಾಡುವವರೇ ಬಹಳ. ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದ ದೃಷ್ಟಿಯಿಂದ ಇತಿಹಾಸವನ್ನು ಕೆದಕಿದಾಗ ನಾಗರೀಕತೆಯ ಉಗಮಕ್ಕೂ ಮುಂಚಿನಿಂದಲೂ ಮಾತೆಯರೇ ಅನ್ನ ನೀಡುವ ಪವಿತ್ರ ಕಾರ್ಯ ಮಾಡುತ್ತಿದ್ದುದಷ್ಟೇ ಅಲ್ಲ ಧಾನ್ಯಗಳನ್ನು ಬೆಳೆಯುವ ಅದ್ಭುತವನ್ನು ಆವಿಷ್ಕರಿಸಿದ ಪರಿಸರ ವಿಜ್ಞಾನಿಗಳು ಎಂಬ ಅಂಶವೂ ಗಮನಕ್ಕೆ ಬರುತ್ತದೆ. ವಿಶ್ವ ಮಹಿಳಾ ದಿನ ಆಚರಿಸುವ ವೇದಿಕೆಗಳಲ್ಲಿ ಆದಿ ಮಾತೆಯರು ಜಗತ್ತಿಗೆ ನೀಡಿದ ಅಪರೂಪದ ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಉಚಿತ, ಅಲ್ಲವೇ?
'ಕೃಷಿ ಕಾರ್ಯ ಸ್ತ್ರೀಯರ ಆವಿಷ್ಕಾರ. ಇದರ ಆವಿಷ್ಕಾರದ ಆರಂಭದ ದಿನಗಳಲ್ಲಿ ವ್ಯವಸಾಯದ ಕೆಲಸ ಪೂರ್ತಿಯಾಗಿ ಸ್ತ್ರೀಯರದ್ದೇ ಆಗಿದ್ದಿತು. ಈ ವಿಚಾರದಲ್ಲಿ ಗಂಡಸರ ಸಹಾಯ, ಪ್ರಯತ್ನ ಎಳ್ಳಷ್ಟೂ ಇರಲಿಲ್ಲ. ಗಂಡಸರು ಬೇಟೆಯನ್ನು ಅರಸುತ್ತಾ ಕಾಡಿನಲ್ಲಿ ಅಲೆಯುತ್ತಿದ್ದರು. ಸ್ತ್ರೀಯರು ವಾಸಸ್ಥಳದ ಸುತ್ತಮುತ್ತ ನೆಲ ಅಗೆದು ಧಾನ್ಯ ಬೆಳೆಯುವ ಪ್ರಯತ್ನ ಮಾಡುತ್ತಿದ್ದರು....ಕೃಷಿ ಕೆಲಸ ಸ್ತ್ರೀಯರಿಂದ ಆವಿಷ್ಕರಿಸಲ್ಪಟ್ಟಿದ್ದರೂ, ಎತ್ತುಗಳನ್ನು ಹೂಡಿ ನೇಗಿಲಿನಿಂದ ಉಳುಮೆ ಮಾಡಿ ದೊಡ್ಡ ಜಮೀನುಗಳ ವ್ಯವಸಾಯ ಆರಂಭವಾದ ಮೇಲೆ, ಸ್ತ್ರೀಯರ ಕೈಯಿಂದ ಇದು ಪುರುಷರ ಕೈಗೆ ಬಂದಿತು....' ಎಂದು ಹಲವಾರು ದಂತೆಕಥೆಗಳು, ಪುರಾವೆಗಳು ಮತ್ತು ಕ್ಷೇತ್ರ ಅಧ್ಯಯನದ ಆಧಾರದ ಮೇಲೆ ನಿರೂಪಿತವಾಗಿರುವ ಸತ್ಯವನ್ನು'ಮಾತೆಯರು ಮಾನ್ಯರಾಗಿದ್ದಾಗ' ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು. ಜಿ. ಕುಮಾರಪ್ಪ ಅವರು ಬೆಂಗಾಲಿಯಿಂದ ಕನ್ನಡಕ್ಕೆ ಅಷ್ಟೇ ಸಮರ್ಥವಾಗಿ ಅನುವಾದಿಸಿದ್ದಾರೆ.
'ಅಮೆರಿಕಾದಲ್ಲಿನ ಒಂದು ಆದಿವಾಸಿ ಗುಂಪಿನ ಹೆಸರು ಚೆರೋಕಿ. ಅವರ ಒಂದು ದಂತಕಥೆಯ ಪ್ರಕಾರ ಒಬ್ಬ ಸ್ತ್ರೀ ಅರಣ್ಯದಲ್ಲಿ ಮೊದಲು ಸಸ್ಯವನ್ನು ಹುಡುಕಿದಳು. ಸಾಯುವಾಗ ಆ ಸ್ತ್ರೀ ತಾನು ಸತ್ತಮೇಲೆ ತನ್ನ ದೇಹವನ್ನು ನೆಲದ ಮೇಲಿಂದ ಎಳೆದುಕೊಂಡು ಹೋಗಬೇಕೆಂದು ಹೇಳಿದ್ದಳು. ಅವಳ ದೇಹ ಎಲ್ಲೆಲ್ಲಿ ನೆಲವನ್ನು ಸ್ಪಶರ್ಿಸಿದ್ದಿತೋ ಅಲ್ಲೆಲ್ಲಾ ಬೆಳೆ ಸಮೃದ್ಧಿಯಾಗಿ ಬೆಳದಿದ್ದಿತು.' ಈ ಬಗೆಯ ದಂತಕಥೆಗಳು ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಪ್ರಚಲಿತವಾಗಿರುವುದನ್ನು ಸಂಗ್ರಹಿಸಿ ದಂತೆಕಥೆಗಳ ಕೋಶವನ್ನೇ ರಚಿಸಿರುವ ಸಂಶೋಧಕ ರಾಬಟರ್್ ಬ್ರಿಫಾಲ್ಟ್ ಅವರ ಕ್ಷೇತ್ರಕಾರ್ಯದ ಅನುಭವಗಳನ್ನು ಉಲ್ಲೇಖಿಸುತ್ತಾ ವಿಶ್ವದ ಎಲ್ಲೆಡೆಯೂ ಸ್ತ್ರೀಯರಿಂದ ಆಗಿರುವ ಹಲವು ಆವಿಷ್ಕಾರಗಳ ಸುದೀರ್ಘ ಪಟ್ಟಿಯನ್ನೇ ನೀಡುತ್ತಾರೆ ದೇಬಿಪ್ರಸಾದ್ ಚಟ್ಟೋಪಾಧ್ಯಾಯ. ಮಾತೃ ಪ್ರಧಾನ ನಾಗರಿಕ ಸಮುದಾಯದ ಉಗಮ ಮತ್ತು ಅದರ ಪರಿಣಾಮಗಳ ಬಗ್ಗೆ ಸಚಿತ್ರ ವಿವರಗಳ ಜೊತೆ ಕ್ರಮೇಣ ಪಿತೃಪ್ರಧಾನ ವ್ಯವಸ್ಥೆಯತ್ತ ನಡೆದ ಕಥೆಯನ್ನು ಕಟ್ಟಿಕೊಡುತ್ತದೆ ಈ ಕೃತಿ.
ಭಾರತದ ಈಶಾನ್ಯ ರಾಜ್ಯಗಳಲ್ಲಿ, ಅದರಲ್ಲೂ ಕಾಮರೂಪದ ಕಾಮಾಕ್ಷ ಪ್ರದೇಶದ ಮತ್ತು ಖಾಸಿ ಜನಾಂಗದಲ್ಲಿ ಇರುವ ಮಾತೃಪ್ರಧಾನ ವ್ಯವಸ್ಥೆಯ ನಿರೂಪಣೆ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಅಭ್ಯಾಸಿಗಳಿಗೆ ಅತ್ಯುಪಯುಕ್ತವಾಗಿದೆ. ಕೇರಳದ ಕೆಲವು ಜನಾಂಗಳಲ್ಲಿ, ಈಜಿಪ್ಟ್, ಸಿಂಧೂ ಬಯಲು, ರೋಮ್, ಅಮೆರಿಕದ ಕೆಲವು ಬುಡಕಟ್ಟುಗಳಲ್ಲಿ ಇರುವ ಮಾತೃಪ್ರಧಾನ ವ್ಯವಸ್ಥೆಯನ್ನು ಇಲ್ಲಿ ಪರಿಚಯಿಸಿದ್ದಾರೆ. 'ಭಾರತೀಯ ನಾಗರೀಕತೆಯ ಮೂಲದಲ್ಲಿ ಮಾತೃಪ್ರಧಾನ ಸಮಾಜದ ಇತಿಹಾಸವಿರುವ ಕಾರಣವು ಅಸ್ಪಷ್ಟವೇನೂ ಅಲ್ಲ. ಏಕೆಂದರೆ, ಸಾಧಾರಣವಾಗಿ ಈ ದೇಶದ ಜನರು ಪಶುಪಾಲನೆಯ ಮೇಲೆ ಅವಲಂಬಿತರಾಗಿಲ್ಲ; ಬದಲಾಗಿ, ವ್ಯವಸಾಯದ ಮೇಲೆ ಅವಲಂಬಿತರಾಗಿದ್ದಾರೆ. ಈ ಕೃಷಿ ಕಾರ್ಯ ಸ್ತ್ರೀಯರ ಆವಿಷ್ಕಾರ. ಕೃಷಿಕೆಲಸವನ್ನು ಅವಲಂಬಿಸಿ ಬೆಳೆದ ಸಮಾಜದಲ್ಲಿ ಸ್ತ್ರೀಯರೇ ಮುಖ್ಯರು, ತಾಯಂದಿರೇ ಮಾನ್ಯರು..........ಒಟ್ಟಂದದಲ್ಲಿ ಭಾರತೀಯ ನಾಗರಿಕತೆ ಎಂದು ಹೇಳುವಲ್ಲಿ ಅರ್ಥವಾಗುವ ಸಂಸ್ಕೃತಿಗಳು ಮಾತೃಪ್ರಧಾನ ಸಮಾಜದ ಗುರುತುಗಳಿಂದ ತುಂಬಿವೆ...........ಭಾರತೀಯ ನಾಗರಿಕತೆಯ ಇತಿಹಾಸವೆಂದು ಬರೆಯಲಾಗಿರುವ ಎಷ್ಟೋ ಇತಿಹಾಸ ಗ್ರಂಥಗಳಲ್ಲಿ ಈ ಮಾತೃಪ್ರಧಾನ ಸಮಾಜದ ಲಕ್ಷಣಗಳ ಬಗ್ಗೆ ಹೆಚ್ಚಿನ ಆಲೋಚನೆ ನಡೆದಿಲ್ಲ....' ಎಂದು ಭಾರತೀಯ ನಾಗರಿಕತೆಯ ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡಲು, ಹೊಸ ಇತಿಹಾಸ ನಡೆಸಲು ಕರೆಕೊಡುವುದರೊಂದಿಗೆ ಈ ಕೃತಿ ಮುಕ್ತಾಯವಾಗುತ್ತದೆ. ಬಹುಶಃ ಜನ್ಮದಾತೆ, ಅನ್ನದಾತೆ, ಪ್ರಾಣದಾತೆ, ಜಗನ್ಮಾತೆ ಎಲ್ಲವೂ ಆಗಿರುವ ಸ್ತ್ರೀಯರು ಈಗ ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ, ಮೀಸಲಾತಿಗಾಗಿ, ತುತ್ತು ಅನ್ನಕ್ಕಾಗಿ ಬೊಗಸೆಯೊಡ್ಡುತ್ತಿರುವುದು ನವ ನಾಗರಿಕತೆಯ ಅವನತಿಗೆ ಸಾಕ್ಷಿಯಾಗುತ್ತಿದೆಯೇ?
ಪರಿಚಯ : ಆರ್. ಸುಧಾ
ಅಧೀಕ್ಷಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳಲ್ಕೆರೆ - 577 526.

No comments:

Post a Comment