Tuesday, March 17, 2009

FELICITATION VOLUME : NIRANTARA - Review by Pustakapreethi


ನಮ್ಮ ನಾಡಿನ ಹಿರಿಯ ಮುತ್ಸದ್ದಿ ಸಂಗಾತಿ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ) ಅವರಿಗೆ ಈಗ 90 ವರ್ಷ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಕಾರರಾಗಿ, ರಾಜ್ಯಸಭೆ ಮತ್ತು ಕರ್ನಾಟಕದ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ನಾಯಕರಾಗಿ ಇವರು ಸಲ್ಲಿಸಿರುವ ಸೇವೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಬಿವಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ವೈಚಾರಿಕ ಸಾಹಿತ್ಯ ಸಂಪದ ಹಲವು ಬಾರಿ ಕನ್ನಡ ಸಾಹಿತ್ಯ ಅಕಾಡಮಿಯ ಗೌರವಕ್ಕೆ, ಓದುಗರ ಆದರಕ್ಕೆ ಪಾತ್ರವಾಗಿದ್ದು, ಅವುಗಳು ಬರುವ ದಿನಗಳಲ್ಲೂ ಪರಿಗಣನೆಗೆ ಬರುವಂಥವು. ನೊಂದವರಿಗೆ ದನಿ ನೀಡಿದ ಈ ಅಜ್ಜನಿಗೆ ನಮ್ಮ ಅಭಿಮಾನಿ ವಿದ್ವಜ್ಜನ ಅರ್ಪಿಸುತ್ತಿರುವ ಮೆಚ್ಚಿಗೆಯ ಕಾಣಿಕೆ ಈ `ನಿರಂತನ‘
ಬಿವಿಕೆಯವರು ತಮ್ಮ ಬಾಳಿನಲ್ಲಿ ಹಚ್ಚಿಕೊಂಡು, ಕಟಿಬದ್ಧ ಕಲಕಳಿಯಿಂದ ಹೋರಾಡಿದ, ಇಂದಿಗೂ ಪ್ರಸ್ತುತವಾದ ಹಲವು ಜ್ವಲಂತ ಸಮಸ್ಯೆಗಳನ್ನು ಕುರಿತು ನಾಡಿನ ಪ್ರಗತಿಶೀಲ ವಿದ್ವಾಂಸರು ಈ ಗ್ರಂಥಕ್ಕಾಗಿ ಮೌಲಿಕ ಲೇಖನಗಳನ್ನು ನೀಡಿ ನುಡಿ ನಮಾನವನ್ನು ಸಲ್ಲಿಸಿದ್ದಾರೆ. ಬಂಡವಾಳ ವ್ಯವಸ್ಥೆಯ ನಿರಂತರ ಶೋಷಣೆಯ ಬೆಳವಣಿಗೆ, ರಾಷ್ಟ್ರ, ರಾಜ್ಯ ಪರಿಕಲ್ಪನೆಗಳ ಸಂಘರ್ಷ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿಬರುವ ಪ್ರತಿರೋಧದ ನೆಲೆಗಳು, ಮಾರ್ಕ್ಸ್ ಮತ್ತು ವಿಜ್ಞಾನ, ಮಹಿಳಾ ಅಭಿವೃದ್ಧಿ ಅಧ್ಯಯನ, ಹಾಲಿ ತಪ್ಪುತ್ತಿರುವ ವಿದೇಶಾಂಗ ನೀತಿ, ಸ್ವಾತಂತ್ರ್ಯ ಸಂಗ್ರಾಮದ ಆಶಯಗಳು. ಮೌಲ್ಯಗಳು ಮತ್ತು ವಾಸ್ತವ, ರೈತ ಕಾರ್ಮಿಕ ಚಳುವಳಿಗಳು, ಕೋಮುವಾದಕ್ಕೆ ತುತ್ತಾದ ಸಮಾಜದಲ್ಲಿ ಧರ್ಮನಿರಪೇಕ್ಷತೆಗೆ ಕುಗ್ಗುತ್ತಿರುವ ಅವಕಾಶಗಳು ಹೀಗೆಲ್ಲ `ನಿರಂತರ‘ ದ ತುಂಬಾ ಗಂಭೀರವಾದ ಬರಹಗಳು ತುಂಬಿದೆ. `ನಿರಂತರ‘ ನಮ್ಮ ನಾಡಿನ ಹೆಸರಾಂತ ವಿದ್ವಜ್ಜನರು ನೀಡಿರುವ ಮಹತ್ವದ, ಮೌಲಿಕ ಲೇಖನಗಳನ್ನೇ ಅಲ್ಲದೇ, ಕಕ್ಕಿಲ್ಲಯರ ಅಭಿಮಾನಿಗಳು ಬರೆದ ಅಭಿನಂದನಾ ಬರಹಗಳನ್ನೂ ಒಳಗೊಂಡಿದೆ. ಒಟ್ಟಾರೆ ಸಂಗ್ರಹಯೋಗ್ಯವಾದ ವೈಚಾರಿಕತೆಯ ಖನಿಯಾಗಿ ರೂಪುಗೊಂಡಿದೆ ಈ `ನಿರಂತರ‘
- ಪುಸ್ತಕದ ಬೆನ್ನುಡಿಯಿಂದ
ಪುಸ್ತಕದ ಆರಂಭದಲ್ಲಿ ಬಿವಿಕೆಯವರ ಕೈಬರಹದಲ್ಲಿ ಇರುವ `ಸಂಗಾತಿಗಳಿಗೆ ಒಂದು ಮನವಿ’ಇಂದಾಗಿ ಈ ಪುಸ್ತಕ ಇನ್ನಷ್ಟು ಆತ್ಮೀಯವಾಗುತ್ತದೆ. ಇದು `ಆ ದಿಶೆಯಲ್ಲಿ ಯೋಚಿಸಿ, ಯೋಜನೆ ರೂಪಿಸಿ, ಕಾರ್ಯಕ್ಕೆ ಇಳಿಯಿರಿ’ ಎಂದು ಕಿರಿಯ ಸಂಗಾತಿಗಳಿಗೆ ಮನವಿ ಮಾಡುತ್ತದೆ.- ವಿಶಾಲಮತಿ

ಶೀರ್ಷಿಕೆ: ನಿರಂತರ ಸಂಪಾದಕರು: ಕೆ.ಎಸ್.ಪಾರ್ಥಸಾರಥಿ ಪ್ರಕಾಶನ:ಎಮ್.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ ಪುಟಗಳು:532 ಬೆಲೆ:ರೂ.300/-
Filed under: ಅಭಿನಂದನ ಗ್ರಂಥ Tagged: , , ,

No comments:

Post a Comment